ಈಕೆಗೆ ಐಷಾರಾಮಿ ರೂಮೇ ಬೇಕಿತ್ತಂತೆ: ಸುಂದರಿಯ ಜಾಲಕ್ಕೆ ಸಿಲುಕಿದವನ ವ್ಯಥೆ ಇದು!

Honey Trap
Published on

ಹಾಸನ: ಸಿಕ್ಕ ಸಿಕ್ಕ ಮುಗ್ಧ ಅವಿವಾಹಿತರಿಗೆ ಮ್ಯಾಟ್ರಿಮೋನಿಯಲ್ಲಿ ಬಲೆ ಬೀಸುವುದಲ್ಲದೇ, ಹಲವು ಮಂದಿ ಬಳಿ ಮದುವೆ ನಾಟಕ ಆಡಿ ಲಕ್ಷ ಲಕ್ಷ ಹಣ ಪೀಕಿರುವ ಮಹಿಳೆಯೊಬ್ಬಳು ಇಷ್ಟಕ್ಕೆ ಸುಮ್ಮನಿರದೇ ಹನಿಟ್ರ್ಯಾಪ್ ಬಲೆ ಬೀಸಿ ಹಾಸನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ಲಕ್ಷ್ಮೀ ಎಂಬಾಕೆ ಚೆನ್ನಾಗಿ ಮೇಕಪ್ ಮಾಡಿಕೊಂಡು ಮ್ಯಾಟ್ರಿಮೋನಿಯಲ್ಲಿ ಹುಡುಗರಿಗೆ ಬಲೆ ಬೀಸುತ್ತಿದ್ದಳು. ಮದುವೆ ಆಗುವುದಾಗಿ ನಂಬಿಸಿ ಹಾಸನ ಮೂಲದ ಪರಮೇಶ್ ಎಂಬುವರಿಂದ ಒಂದು ವರ್ಷದಲ್ಲಿ ಸುಮಾರು ಆರು ಲಕ್ಷ ಪೀಕಿದ್ದಾಳೆ. ಇದೀಗ ಇನ್ನು ಹೆಚ್ಚಿನ ಹಣ ನೀಡುವಂತೆ ಪರಮೇಶ್​ಗೆ ಜೀವ ಬೆದರಿಕೆ ಹಾಕಿ, ಪೊಲೀಸ್​ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಶುಂಠಿ ಬೆಳೆಗಾರ ಹಾಗೂ ವ್ಯಾಪಾರ ಮಾಡಿಕೊಂಡಿದ್ದ ಪರಮೇಶ್​ಗೆ ಲಕ್ಷ್ಮೀ ಹಾಗೂ ಆಕೆ ಬಾಯ್ ಫ್ರೆಂಡ್ ಶಿವಣ್ಣ ಸೇರಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಪರಮೇಶ್ ಈ ವಿಚಾರವನ್ನ ಪರಿವರ್ತನ ಮಹಿಳಾ ಸಂಘದ ಶಿವಮ್ಮ ಹಾಗೂ ಭಾಗ್ಯ ಕಲಿವೀರ್ ಬಳಿ ನೋವು ತೋಡಿಕೊಂಡಿದ್ದಾರೆ. ಆಗ ಶಿವಮ್ಮ ಹಾಗೂ ಭಾಗ್ಯ ಕಲಿವಿರ್ ಪರಮೇಶ್​ಗೆ ಧೈರ್ಯ ತುಂಬಿ ಒಂದು ತಿಂಗಳು ಹೊಂಚು ಹಾಕಿ ಹಾಸನ ಸಿಟಿ ಸರ್ಕಲ್ ಇನ್ಸ್​ಪೆಕ್ಟರ್​ ಕೃಷ್ಣ ರಾಜ್ ಸಹಾಯದಿಂದ ಲಕ್ಷ್ಮಿ ಮತ್ತು ಆಕೆ ಬಾಯ್​ಫ್ರೆಂಡ್​ ಶಿವಣ್ಣನನ್ನ ಬಂಧಿಸಿದ್ದಾರೆ..

ಆರೋಪಿ ಲಕ್ಷ್ಮಿ ಬೆಂಗಳೂರಿನ ಓರ್ವ ಕಾನ್ಸ್​ಟೇಬಲ್ ಸೇರಿದಂತೆ ಆರಕ್ಕು ಹೆಚ್ಚು ಮಂದಿ ಬಳಿ ಲಕ್ಷಾಂತರ ಹಣ ಕಿತ್ತಿದ್ದಾಳೆ. ಇನ್ನು ಬಂಧಿತ ಲಕ್ಷ್ಮಿ ಚಿಕ್ಕಬಳ್ಳಾಪುರ ಬಾಗೆಪಲ್ಲಿಯ ಯಲ್ಲಂಪಲ್ಲಿ ಗ್ರಾಮದವಳು. ಇವಳ ಜತೆ ಇದ್ದ ಶಿವಣ್ಣ ಕೋಲಾರ ಗಂಗಮ್ಮನ ಪಾಳ್ಯದವನು ಎಂದು ಹೇಳಲಾಗ್ತಿದೆ. ಲಕ್ಷ್ಮಿ ಹಾಗೂ ಶಿವಣ್ಣ ತಮಗೆ ತಾವು "ನ್ಯಾಷನಲ್ ಆ್ಯಂಟಿ ಕ್ರೈಂ ಅಂಡ್ ಹ್ಯೂಮನ್ ರೈಟ್ಸ್ ಆಫ್ ಇಂಡಿಯಾ " ಸ್ಟೇಟ್ ಪ್ರೆಸಿಡೆಂಟ್ ಎಂದು ಹೇಳಿ ಸಂತ್ರಸ್ತರಿಗೆ ಬೆದರಿಕೆ ಕೂಡ ಹಾಕುತ್ತಿದ್ದರು. ಅದಕ್ಕೆ ಸಂಬಂಧಿಸಿ ನಕಲಿ ಐಡೆಂಟಿಟಿ ಕಾರ್ಡ್​ ಕೂಡ ಪತ್ತೆಯಾಗಿದೆ. ಇದರ ಜತೆಗೆ ಇಬ್ಬರು ವಿಲಾಸಿ ಜೀವನ ಮಾಡ್ತಿದ್ದರು. ಸದ್ಯ ಬಂಧಿತರಿಂದ ಒಂದು ಇನ್ನೊವಾ ಕಾರನ್ನು ಹಾಸನ ಪೊಲೀಸ್ ವಶಪಡಿಸಿಕೊಂಡಿದೆ.

ಇಷ್ಟೆ ಅಲ್ಲ ಆರೋಪಿ ಲಕ್ಷ್ಮಿ ಹಾಸನಕ್ಕೆ ಬಂದಾಗಲೆಲ್ಲಾ ಆಕೆಗೆ ಐಷಾರಾಮಿ ರೂಮ್​ ಅನ್ನು ಪರಮೇಶ್ ಮಾಡಿಕೊಡಬೇಕಿತ್ತಂತೆ. ಹೀಗೆ ಸಿಕ್ಕ ಸಿಕ್ಕವರಿಗೆ ಮೋಸ ಮಾಡಿ ತಿರುಗಿಕೊಂಡಿದ್ದ ಲಕ್ಷ್ಮೀ ಹಾಗೂ ಶಿವಣ್ಣ ಈಗ ಹಾಸನ ಜೈಲು ಸೇರಿದ್ದಾರೆ. ಸಧ್ಯ ನೊಂದ ಪರಮೇಶ್ ತನಗಾದ ಅನ್ಯಾಯ ಹೇಳಿಕೊಂಡು ಇನ್ನು ಹಲವು ಪುರುಷರು ಈ ಮಾಯಾಜಾಲಕ್ಕೆ ಬೀಳೋದನ್ನ ತಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net