

ಮೂಡಲಗಿ: ಪುರಸಭೆ ಸದಸ್ಯನ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಭಾನವಾರ ನಡೆದಿದೆ. ಅಬ್ದುಲ್ ಪೈಲವಾನ್, ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿಶಿವಾಪುರ ಬಂಧಿತರು. ಹಣ ಸುಲಿಗೆ ಮಾಡುವ ಉದ್ದೇಶದಿಂದ ಪುರಸಭೆ ಸದಸ್ಯನ ಜತೆ ಮಹಿಳೆ ಸಲುಗೆ ಬೆಳೆಸಿಕೊಂಡಿದ್ದಾರೆ. ನಂತರ ಇಬ್ಬರು ಖಾಸಗಿಯಾಗಿರುವ ವಿಡಿಯೋವನ್ನು ಈ ತಂಡ ಮಾಡಿಕೊಂಡಿದೆ. ಇದಾದ ನಂತರ ಆ ವಿಡಿಯೋ ಇಟ್ಟುಕೊಂಡು ಪುರಸಭೆ ಸದಸ್ಯನಿಗೆ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದೆ. ಹಣ ಕೊಡದೇ ಇದ್ದರೆ ವಿಡಿಯೋ ಬಿಡುಗಡೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಪುರಸಭೆ ಸದಸ್ಯ 9 ಲಕ್ಷ ರೂ. ಹಣ ನೀಡಿದ್ದಾನೆ. ಮತ್ತೆ ಒಂದು ಲಕ್ಷ ರೂ. ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದರಿಂದ ಬೇಸತ್ತು ಡಿ.7ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.