ರಾಣೆಬೆನ್ನೂರಲ್ಲೊಂದು ಹನಿಟ್ರ್ಯಾಪ್ ಪ್ರಕರಣ ಶಂಕೆ; ವೈದ್ಯ, ಯುವತಿಯಿಂದ ದೂರು-ಪ್ರತಿ ದೂರು ದಾಖಲು

Crime Logo
Published on

ರಾಣೆಬೆನ್ನೂರ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಹಾಗೂ ಅದೇ ಯುವತಿ ವೈದ್ಯನಿಗೆ ಹಣ ಕೊಡದಿದ್ದರೆ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುವ ಪ್ರಕರಣ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದ್ದು, ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗಿದೆ.
ನಗರದ ಮೇಡ್ಲೇರಿ ರಸ್ತೆಯ ಹಿತ್ತಲಮನಿ ಡೆಂಟಲ್ ಕ್ಲಿನಿಕ್‌ನ ಡಾ. ವಿಜಯಕುಮಾರ ರಂಗಪ್ಪ ಹಿತ್ತಲಮನಿ ಎಂಬುವರ ವಿರುದ್ಧ ಯುವತಿ ದೂರು ನೀಡಿರುವುದು. ಯುವತಿ, ಆಕೆಯ ತಾಯಿ ಹಾಗೂ ಮತ್ತೊಬ್ಬ ಜಟ್ಟೆಪ್ಪ ಎಂಬುವನ ವಿರುದ್ಧ ವೈದ್ಯ ವಿಜಯಕುಮಾರ ಪ್ರತಿ ದೂರು ದಾಖಲಿಸಿದ್ದಾನೆ.
ಯುವತಿ ದೂರೇನು…?
ತಾನು 2 ವರ್ಷದಿಂದ ವೈದ್ಯನ ಬಳಿ ಕೆಲಸ ಮಾಡುತ್ತಿದ್ದೆ. ಈತ ಬಲವಂತವಾಗಿ ನನ್ನನ್ನು ರಾತ್ರಿ ಸಮಯದಲ್ಲಿ ಉಳಿಸಿಕೊಂಡು ಸಂಭೋಗ ಮಾಡಿ ಮದುವೆಯಾಗುವುದಾಗಿ ನಂಬಿಸಿ ಎರಡು ಬಾರಿ ಗರ್ಭವತಿಯಾಗುವಂತೆ ಮಾಡಿದ್ದ. ನನ್ನ ವಿರೋಧದ ನಡುವೆ ಗರ್ಭಪಾತ ಮಾಡಿಸಿದ್ದು, ಈವರೆಗೂ ಮದುವೆಯಾಗದೆ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ವೈದ್ಯನ ದೂರೇನು…?
ಯುವತಿಯು ಕೆಲಸಕ್ಕೆ ಬಂದಾಗ ಆಕೆಯ ತಾಯಿ ಹಾಗೂ ಜಟ್ಟೆಪ್ಪ ಸೇರಿ ನಮಗೆ ಹಣದ ಸಮಸ್ಯೆಯಿದೆ. ಆದ್ದರಿಂದ ಹಣ ಕೊಡಿ ಎಂದು ಹಣ ಪಡೆದುಕೊಂಡಿದ್ದರು. ಇದಾದ ಬಳಿಕ ಯುವತಿ ಸರಿಯಾಗಿ ಕೆಲಸಕ್ಕೆ ಬಾರದೆ ಇದ್ದಿದ್ದರಿಂದ ನೀನು ಇನ್ಮುಂದೆ ಕೆಲಸ ಮಾಡುವುದು ಬೇಡ ಎಂದು ಹೇಳಿದ್ದೆ.
ಇದಕ್ಕೆ ಯುವತಿಯು ನಾನು ನಿನ್ನನ್ನು ಪ್ರೀತಿ ಮಾಡುತ್ತಿದ್ದೇನೆ. ನೀನು ಪ್ರೀತಿ ಮಾಡದೆ ಹೋದರೆ ನೀನು ನನ್ನನ್ನು ದೈಹಿಕವಾಗಿ ಬಳಸಿಕೊಂಡು ಬಿಟ್ಟಿದ್ದೀಯಾ ಅಂತಾ ಕೇಸು ದಾಖಲಿಸುತ್ತೇನೆ. ನಿಮ್ಮ ಗೌರವ ಹಾಳು ಮಾಡುತ್ತೇನೆ. ಹಣ ಕೊಡದೆ ಹೋದರೆ ನಿಮ್ಮನ್ನು ಕೊಲೆ ಮಾಡಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾಳೆ. ಜತೆಗೆ ನನ್ನ ಕಡೆಯಿಂದ ಮೋಸದಿಂದ ಹಣ ಪಡೆದುಕೊಂಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಇಬ್ಬರ ಕಡೆಯಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net