

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮಂತ್ರಿಗಳು, ಶಾಸಕರು ಹಾಗೂ ಪ್ರಭಾವಿಗಳಿಗೆ ಹನಿಟ್ರಾೃಪ್ ಪ್ರಕರಣ ಕುರಿತು ಯಾವ ರೀತಿ ತನಿಖೆ ನಡೆಯಬೇಕು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಹನಿಟ್ರಾೃಪ್ ವಿಷಯ ಕುರಿತು ಸಚಿವ ಕೆ.ಎನ್.ರಾಜಣ್ಣ ಹೇಳಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಇನ್ನೂ ದೂರು ದಾಖಲಾಗಿಲ್ಲ. ಇದರಲ್ಲಿ ಯಾರ‌್ಯಾರಿದ್ದಾರೆ ಎಂಬುದು ಬೆಳಕಿಗೆ ಬರಬೇಕಿದೆ. ಪೊಲೀಸರು ಯಾವ ರೀತಿಯ ತನಿಖೆ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಗೊತ್ತಾಗಲಿದೆ. ಅಲ್ಲದೆ, ಎಸ್‌ಸಿ, ಎಸ್‌ಟಿ ಸಚಿವರ ಮೇಲೆ ಅಲ್ಲ ಗರ್ಜಿಸುವವರನ್ನು ಗುರಿಯಾಗಿಸಿಕೊಂಡು ಸಿಡಿ ತೋರಿಸಿ ಹೆದರಿಸುವ ಕೆಲಸ ನಡೆಯುತ್ತಿದೆ ಎಂದರು.
ವರದಿ ಬಳಿಕ ಕ್ರಮ:ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಏನೇ ಸೌಲಭ್ಯ ಕಲ್ಪಿಸಿದರೂ ಪ್ರಯೋಜನ ಇಲ್ಲ. ಈ ಹಿಂದೆ ಆರೋಗ್ಯ ಯೋಜನೆ ಕೊಡಲು ಮುಂದಾಗಿತ್ತು. ಆದರೆ, ಕೊನೆಗೆ ಅವರೇ ಕೈ ಬಿಟ್ಟಿದ್ದಾರೆ. ಒಂದು ವೇಳೆ ಮಹಾರಾಷ್ಟ್ರ ಸರ್ಕಾರವು ಕರ್ನಾಟಕದಲ್ಲಿ ಮರಾಠಿ ಭಾಷಿಕರಿಗೆ ಪ್ರತ್ಯೇಕ ಯೋಜನೆಗಳ ಸೌಲಭ್ಯ ಕಲ್ಪಿಸುತ್ತಿರುವ ಕುರಿತು ಜಿಲ್ಲಾಡಳಿತ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮರಾಠಿಗರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ:ಈಗಾಗಲೇ ಕರ್ನಾಟಕ ಸರ್ಕಾರದ ಯೋಜನೆ ಸೌಲಭ್ಯಗಳು ಎಲ್ಲ ಭಾಷಿಕರಿಗೆ ಸಿಗುತ್ತಿವೆ. ನರೇಗಾ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೆಲಸ ನೀಡಲಾಗುತ್ತಿದೆ. ಇಲ್ಲಿನ ಮರಾಠಿ ಭಾಷಿಕರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಮರಾಠಿ ಭಾಷೆಯಲ್ಲಿಯೇ ದಾಖಲೆಗಳನ್ನು ಕೊಡಬೇಕು ಎಂದು ಅವರು ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಕನ್ನಡ ಭಾಷೆಯಲ್ಲಿಯೇ ದಾಖಲೆ ನೀಡಲಾಗುತ್ತಿದೆ. ಅಲ್ಲದೆ, ಆನ್‌ಲೈನ್‌ನಲ್ಲಿಯೇ ಎಲ್ಲ ದಾಖಲೆಗಳು ಸಿಗುತ್ತಿರುವ ಸಂದರ್ಭದಲ್ಲಿ ಕೈಬರಹ ದಾಖಲೆಗಳು ಕೊಡಲು ಅವಕಾಶ ಇಲ್ಲ. ಈ ಕುರಿತು ಜಿಲ್ಲಾಡಳಿತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ. - ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ.