

ಶಿವಮೊಗ: ಸ್ಪೀಕರ್ ಯು.ಟಿ.ಖಾದರ್ ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆದಿರುವುದು ಸ್ವಾಗತಾರ್ಹ. ಆದರೆ ಹನಿಟ್ರಾೃಪ್‌ಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಿರಂತರ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸಭಾಧ್ಯಕ್ಷರ ಪೀಠಕ್ಕೆ ಅವಮಾನ ಮಾಡುವುದು ಶಾಸಕರ ಉದ್ದೇಶವಾಗಿರಲಿಲ್ಲ. ಸಚಿವ ಕೆ.ಎನ್.ರಾಜಣ್ಣ ಅವರು ಹನಿಟ್ರಾೃಪ್ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಅದರ ವಿರುದ್ಧ ನಾವು ಸದನದಲ್ಲಿ ಚರ್ಚೆ ನಡೆಸಬೇಕಾಯಿತು. ಈ ವೇಳೆ ಸ್ಪೀಕರ್‌ಗೆ ನಮ್ಮಿಂದ ನೋವಾಗಿರಬಹುದು. ಆದರೆ ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಸೇರಿ ಅನೇಕರು ಸ್ಪೀಕರ್ ಯು.ಟಿ.ಖಾದರ್‌ಗೆ ಸಲಹೆ ನೀಡಿದ್ದರು. ಅದನ್ನು ಪರಿಗಣಿಸಿ ಸ್ಪೀಕರ್ ನಿರ್ಧಾರ ಪ್ರಕಟಿಸಿದ್ದಾರೆ. ಬೇಸರದ ಸಂಗತಿ ಎಂದರೆ ಹನಿಟ್ರಾೃಪ್ ಸಂಗತಿ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅಮಾನತು ಮಾಡಿದ ಕಾರಣದಿಂದ ವಿಧಾನ ಮಂಡಲದ ಜಂಟಿ ಸದನ ಸಮಿತಿ ಸಭೆಗಳಲ್ಲಿ ನಾನು ಭಾಗವಹಿಸುತ್ತಿರಲಿಲ್ಲ. ನಮ್ಮ ಸಮಿತಿ ಮೂರು ರಾಜ್ಯಗಳ ಅಧ್ಯಯನ ಪ್ರವಾಸ ಕೈಗೊಂಡಿದೆ. ನನ್ನ ಮೇಲಿನ ಅಮಾನತು ಆದೇಶ ಸ್ಪೀಕರ್ ಹಿಂಪಡೆದಿರುವುದರಿಂದ ನಾನು ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.
ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಪ್ರಮುಖರಾದ ದೀನದಯಾಳು, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.