ಜೇನು ಕೃಷಿ ಹೆಚ್ಚು ಲಾಭದಾಯಕ

MDG3
Published on

ಮೂಡಿಗೆರೆ: ಜೇನು ಕೃಷಿಯಿಂದ ಹೆಚ್ಚು ಲಾಭದ ಜತೆಗೆ ಜೇನು ಹುಳುವಿನ ಸಂತತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ವೈಜ್ಞಾನಿಕ ಜೇನು ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿಕರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದೆ. ಅಧಿಕಾರಿಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಸವಲತ್ತುಗಳನ್ನು ತಲುಪಿಸಬೇಕು. ಗ್ರಾಮೀಣ ಪ್ರದೇಶದ ರೈತರಿಗೆ ಜೇನು ಕೃಷಿಯ ಅರಿವಿನ ಕೊರತೆ ಇದ್ದು, ಅವರಿಗೆ ಜೇನು ಕೃಷಿ ಬಗ್ಗೆ ಪರಿಚಯ ಮೂಡಿಸಲು ಪ್ರತಿ ಗ್ರಾಪಂ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೇನು ಸಾಕಾಣಿಕೆ ಮಾಡಲು ಆಸಕ್ತ ರೈತರಿಗೆ ಸರ್ಕಾರ ಸಹಾಯಧನದಲ್ಲಿ ಜೇನುಕೃಷಿ ಪೆಟ್ಟಿಗೆ ಒದಗಿಸುತ್ತದೆ. ಮಲೆನಾಡಿನಲ್ಲಿ ಭತ್ತದ ಕೃಷಿ ಪ್ರತಿ ವರ್ಷ ಕಡಿಮೆಯಾಗುತ್ತಿದ್ದು, ಭತ್ತದ ಬೆಳೆ ಕಣ್ಮರೆಯಾಗುವ ಆತಂಕವಿದೆ. ಭತ್ತ ಲಾಭದಾಯಕವಲ್ಲ ಎಂದು ರೈತರು ಭತ್ತದ ಕೃಷಿಯ ಕಡೆಗೆ ಆಸಕ್ತಿ ತೋರುತ್ತಿಲ್ಲ. ಆದರೆ ನಮ್ಮ ನದಿ ಮತ್ತು ಜಲಮೂಲಗಳು ನಿರಂತರವಾಗಿ ಹರಿಯಬೇಕಾದರೆ ಹಾಗೂ ಅಂತರ್ಜಲ ವೃದ್ಧಿಸಬೇಕಾದರೆ ಗದ್ದೆಗಳಲ್ಲಿ ರೈತರು ಭತ್ತದ ಕೃಷಿ ನಡೆಸುವುದು ಅವಶ್ಯ. ಭತ್ತ ಬೆಳೆಯುವ ರೈತರಿಗೆ ಸರ್ಕಾರ ಸಹಾಯಧನ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net