ಹಾವೇರಿ: ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ರಸ್ತೆಯಲ್ಲಿ ಹೆಜ್ಜೇನು ದಾಳಿಯಿಂದಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನಗರದ ಜೆ.ಪಿ. ವೃತ್ತದಿಂದ ಮುನ್ಸಿಪಲ್ ಹೈಸ್ಕೂಲ್‌ಗೆ ಹೋಗುವ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಹೆಜ್ಜೇನುಗಳು ಕಾಣಿಸಿಕೊಂಡಿದ್ದವು. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಏಕಾಏಕಿ ದಾಳಿ ಮಾಡಿ ಕಚ್ಚಿದ್ದವು.
ಜೇನು ಕಂಡು ಗಾಬರಿಗೊಂಡ ಜನರು, ದಿಕ್ಕಾಪಾಲಾಗಿ ಓಡಲಾರಂಭಿಸಿದ್ದರು. ಜೇನು ಕಡಿಸಿಕೊಂಡ ಕೆಲವರು, ಸ್ಥಳೀಯರ ಬೈಕ್‌ಗಳಲ್ಲಿ ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡರು. ಒಬ್ಬರ ಕಣ್ಣಿಗೆ ಜೇನುಹುಳು ಕಚ್ಚಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಎಲ್ಲೋ ಇದ್ದ ಜೇನುಹುಳುಗಳು ಏಕಾಏಕಿ ರಸ್ತೆಗೆ ಬಂದಿದ್ದವು. ರಸ್ತೆಯಲ್ಲಿ ಹೊರಟಿದ್ದ ವಿದ್ಯಾರ್ಥಿಗಳು, ವೃದ್ಧರು, ಮಕ್ಕಳು ಹಾಗೂ ಇತರರ ಮೇಲೆ ದಾಳಿ ಮಾಡಿದವು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.