ಹಾರೋಹಳ್ಳಿಯಲ್ಲಿ ಶವಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಜನರು ಅಸ್ವಸ್ಥ

2-pnp 1
Published on

ಪಾಂಡವಪುರ: ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಬುಧವಾರ ಶವಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ರಾಮದ ಧರ್ಮರಾಜು ಎಂಬುವರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಸಂಬಂಧಿಕರು ವಿಶ್ವೇಶ್ವರಯ್ಯ ನಾಲಾ ಏರಿ ಸಮೀಪದ ಮೃತರ ಜಮೀನಿನಲ್ಲಿ ಶವಸಂಸ್ಕಾರ ನಡೆಸಲು ತೆರಳುತ್ತಿದ್ದರು. ಈ ವೇಳೆ ಶವದ ಮುಂದೆ ಹಚ್ಚಿದ್ದ ಧೂಪದ ಹೊಗೆ ಮತ್ತು ಶಬ್ದಕ್ಕೆ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಶವಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ದಾಳಿ ನಡೆಸಿದವು.

ಜೇನು ದಾಳಿಯಿಂದ ಅಸ್ವಸ್ಥರಾದವರನ್ನು ಪಟ್ಟಣದ ಉಪವಿಭಾಗೀಯ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಕೆಲವರು ತುರ್ತು ನಿಗಾ ಘಟಕದಲ್ಲಿ, ಮತ್ತೆ ಕೆಲವರು ಸಾಮಾನ್ಯ ವಾರ್ಡ್‌ನಲ್ಲಿ, ಕೆಲವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಜೇನು ಕಡಿತಕ್ಕೆ ಒಳಗಾದವರ ಮುಖ, ಕೈ ಕಾಲುಗಳಲ್ಲಿ ಊತ ಕಾಣಿಸಿಕೊಂಡಿದೆ. ಕೆಲವರು ತೀವ್ರ ಅಸ್ವಸ್ಥರಾಗಿ ವಾಂತಿ ಮಾಡಿಕೊಂಡರು. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆಲವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಡಾ.ಶಿಲ್ಪಶ್ರೀ ಎಲ್ಲರಿಗೂ ಚಿಕಿತ್ಸೆ ನೀಡಿದರು. ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಡಾ.ಇಂದ್ರೇಶ್, ಕಾಂಗ್ರೆಸ್ ಮುಖಂಡರಾದ ಎಚ್.ತ್ಯಾಗರಾಜು, ಕುಬೇರ ಹೆಜ್ಜೇನು ದಾಳಿಗೊಳಗಾದ ಜನರ ಆರೋಗ್ಯ ವಿಚಾರಿಸಿದರು. ಇತ್ತ ಕೆಲವರು ಮಾತ್ರ ಜಮೀನಿಗೆ ತೆರಳಿ ಮೃತರ ಅಂತ್ಯಸಂಸ್ಕಾರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net