

ಕೋಲಾರ: ಪೊಲೀಸ್ ವೃತ್ತಿಯಲ್ಲಿ ಪ್ರಾಮಾಣಿಕತೆ ಮುಖ್ಯ, ಕರ್ತವ್ಯದಲ್ಲಿ ಸಮಯ ಪಾಲನೆ, ಶಿಸ್ತು ಇಲ್ಲದಿದ್ದರೆ ಸೇವೆಗೆ ಬೆಲೆ ಇರುವುದಿಲ್ಲ ಎಂದು ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಕೆ.ಸುರೇಶ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿ, ಭಾರತೀಯ ವಾಯುನೆಲೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರ್ಪಡೆಯಾದೆ. ರಾಜ್ಯದ ನಾನಾ ಜಿಲ್ಲೆ, ಬೆಂಗಳೂರಿನ ಹಲವೆಡೆ ಕೆಲಸ ಮಾಡಿದ್ದೇನೆ. ಜಿಲ್ಲೆಯ ಮುಳಬಾಗಲಿನಲ್ಲಿ ಸೇವೆ ಸಲ್ಲಿಸುವಾಗ ನಿವೃತ್ತರಾದ ಬಗ್ಗೆ ನೆನಪುಗಳನ್ನು ಹಂಚಿಕೊಂಡರು.
ಇಡೀ ಸಮಾಜ ಪೊಲೀಸರ ಕಾರ್ಯವೈಖರಿಯನ್ನು ಗಮನಿಸುತ್ತಿರುತ್ತದೆ. ಪೊಲೀಸ್ ಸೇವೆಯಿಂದ ಸಮಾಜವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳಬಹುದು ಎಂದರು.
ಧ್ವಜಗಳನ್ನು ಸರಿಯಾದ ಸಮಯಕ್ಕೆ ನೀಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಾಗಿಯೇ1965 ಏ. 2ರಂದು ಪೊಲೀಸ್ ಧ್ವಜ ದಿನಾಚರಣೆ ಆರಂಭಿಸಲಾಗಿದ್ದು, ಅಂದೇ ಧ್ವಜಗಳನ್ನು ಠಾಣೆಗಳಿಗೆ ನೀಡುವ ಬದಲು ವಾರದ ಮುನ್ನವೇ ನೀಡಿದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಮಗ್ರ ವರದಿ ವಾಚಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಪೊಲೀಸ್ ಸೇವೆಯಲ್ಲಿರುವ ಎಲ್ಲರೂ ತಮ್ಮನ್ನು ಪುನರ್ ಅರ್ಪಿಸಿಕೊಳ್ಳುವ ಈ ದಿನವನ್ನು ಪೊಲೀಸ್ ಕಲ್ಯಾಣ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ನೆನೆದು ಕಲ್ಯಾಣ ಕಾರ್ಯಕ್ರಮ ನಡೆಸಲಾಗುತ್ತದೆ. ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡುವುದು ವಾಡಿಕೆಯಲ್ಲಿದೆ. ಅದರಂತೆ ಕಳೆದ 2024ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಧ್ವಜಗಳ ಮಾರಾಟದಿಂದ 25.40 ಲಕ್ಷ ರೂ. ಹಣ ಬಂದಿದ್ದು, ಅದರಲ್ಲಿ 12.20 ಲಕ್ಷ ರೂ. ಜಿಲ್ಲೆಯ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ 12.20 ಲಕ್ಷ ರೂ., ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ ಎಂದು ವಿವರಿಸಿದರು.
ಎಂ.ಡಿ. ಜುಮ್ನಾಳ್ ನೇತೃತ್ವದಲ್ಲಿ 6 ತಂಡಗಳಿಂದ ಪಥ ಸಂಚಲನ ನಡೆಯಿತು. ಬ್ಯಾಂಡ್ ಮಾಸ್ಟರ್ ಶಿವಾನಂದ್ ತಂಡದಿಂದ ಆಕರ್ಷಕ ವಾದ್ಯ ಮೂಡಿ ಬಂದಿತು. ಕಳೆದ ಸಾಲಿನಲ್ಲಿ ನಿವೃತ್ತರಾದ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ 75 ವರ್ಷ ಮೇಲ್ಪಟ್ಟ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಎಎಸ್ಪಿಗಳಾದ ಸಿ.ಆರ್.ರವಿಶಂಕರ್, ಜಗದೀಶ್, ಡಿವೈಎಸ್ಪಿಗಳಾದ ಎಂ.ಎಚ್.ನಾಗ್ತೆ, ನಂದಕುಮಾರ್, ಮಂಜುನಾಥ್ ಇದ್ದರು.