

ಮೈಸೂರು: ಜೀವನದಲ್ಲಿ ಗುರಿ ಸಾಧಿಸಲು ಪ್ರತಿಭೆ ಇದ್ದರೆ ಸಾಲದು. ಅದನ್ನು ಸಾಧಿಸುವ ಛಲ, ಪ್ರಾಮಾಣಿಕ ಪುಯತ್ನ, ತಪಸ್ಸು, ಶ್ರದ್ಧೆ ಇರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ ಕುಮಾರ್ ಹಂಚಾಟೆ ಹೇಳಿದರು.
ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರರ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಮೂರ್ನಾಲ್ಕು ದಶಕಗಳ ಹಿಂದೆ ಶೈಕ್ಷಣಿಕ ವ್ಯವಸ್ಥೆ ಇಷ್ಟು ಸುಧಾರಣೆ ಕಂಡಿರಲಿಲ್ಲ. ಬಹಳಷ್ಟು ಶಾಲೆಗಳು ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿದ್ದವು. ಆದರೆ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ ಎಂದರು.
ವಿದ್ಯಾರ್ಥಿಗಳು ಸಕಲ ಸೌಲಭ್ಯಗಳೊಂದಿಗೆ ಈಗ ಶಿಕ್ಷಣ ಪಡೆಯುತ್ತಿದ್ದಾರೆ. ಇದರಿಂದ ಅಂಕ ಗಳಿಕೆಯಲ್ಲಿ ಪೈಪೋಟಿ ಹೆಚ್ಚುತ್ತಿದೆ. ಈಗ ಯುವ ಪೀಳಿಗೆಗೆ ಸಾಧನೆ ಮಾಡಲು ಭರಪೂರ ಅವಕಾಶ ಇದ್ದು, ಉನ್ನತ ಶಿಕ್ಷಣ ಪಡೆದ ಮಕ್ಕಳ ಸೇವೆ ಸಮಾಜಕ್ಕೆ ಸಿಗುವಂತಾಗಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮೂಲಕ ಯುುವ ಪೀಳಿಗೆಯಲ್ಲ್ಲಿ ಸಾಧನೆಯ ಕನಸು ಬಿತ್ತುವ ಕಾರ್ಯವನ್ನು ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರರ ಸಂಘ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖವಾಗಿ ಸಾಮಾಜಿಕ ಸಂಘ ಸಂಸ್ಥೆಗಳು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಹಾಕಿಕೊಂಡರೆ ಅನುಕೂಲವಾಗುತ್ತದೆ. ಸಂಗ್ರಹಿಸಿದ ಹಣವನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸಿದಾಗ ಅದು ದೇವತಾ ಕಾರ್ಯಕ್ಕೆ ಸಮಾನವಾಗುತ್ತದೆ ಎಂದು ಅಭಿಪಾಯಪಟ್ಟರು.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಗ್ರಾಮೀಣ ಪ್ರದೇಶದಿಂದ ಬಂದ ನಾನು ಶಿಕ್ಷಣದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು. ಹಾಗಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.
ನ್ಯೂರೋ ಸರ್ಜನ್ ಡಾ.ಎಲ್.ಡಿ. ಸತ್ಯನಾರಾಯಣ ಲಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಆರ್. ರಾಜೇಶ್‌ನಾಯಕ್, ಮೈಸೂರು ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಪತಂಗೆ, ಮೈಸೂರು ಜಿಲ್ಲಾ ಭಾವಸಾರ ಕ್ಷತ್ರಿಯ ಪದವೀಧರರ ಸಂಘದ ಮಾಜಿ ಅಧ್ಯಕ್ಷ ಎಸ್. ಶಂಕರರಾವ್ ಅಂಚಳಕರ್ ಇತರರು ಇದ್ದರು.