

ರಾವಂದೂರು: ನಾನು ತಾಲೂಕಿನ ಜನತೆಗೆ ನೀಡಿದ್ದ ಅಭಿವೃದ್ಧಿ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತಿದ್ದೇನೆ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾಮನಾಥ ತುಂಗಾ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ತಾಲೂಕಿನ ಜನತೆಗೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದರ ಮೂಲಕ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ. ಪ್ರತಿ ಸಮುದಾಯಕ್ಕೂ ಕೂಡ ಅನುದಾನಗಳನ್ನು ನೀಡಿ ಸಾರ್ವಜನಿಕ ಉಪಯೋಗಕ್ಕಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಸುತ್ತಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಭವನಗಳ ಕೊರತೆ ಇರುವುದರ ಬಗ್ಗೆ ಸಾರ್ವಜನಿಕರು ನನಗೆ ದೂರನ್ನು ನೀಡುತ್ತಿದ್ದರು. ಇದನ್ನು ಮನಗಂಡು ಪ್ರತಿ ಸಮುದಾಯಕ್ಕೂ ಕೂಡ ಭವನಗಳ ನಿರ್ಮಾಣವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಅದರಂತೆ ಅನುದಾನ ಬಿಡುಗಡೆಗೊಂಡು ಭವನಗಳ ನಿರ್ಮಾಣಕ್ಕೆ ಚಾಲನೆ ನೀಡುತ್ತಿದ್ದೇನೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಆರ್.ಎಸ್.ಮಹದೇವ್ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಸಚಿವರು ಅನುದಾನಗಳನ್ನು ತಂದು ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪೂರ್ಣಗೊಳಿಸುವ ಮೂಲಕ ಗ್ರಾಮೀಣ ಜನತೆಗೆ ಸಹಕಾರಿಯಾಗಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡುವ, ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿರುವ ಸಚಿವರ ಜತೆ ಸದಾ ನಾವಿರಬೇಕು. ಅವರ ಕೈ ಬಲ ಪಡಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದರು.
ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರ್ ಲೋಕೇಶ್ ತಹಸಿಲ್ದಾರ್ ನಿಸರ್ಗ ಪ್ರಿಯ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ನಿರ್ಮಿತಿ ಕೇಂದ್ರ ಅಭಿಯಂತರ ಲವ, ಅಹಮ್ಮದ್, ಲೋಕೋಪಯೋಗಿ ಅಭಿಯಂತರ ವೆಂಕಟೇಶ್, ದಿನೇಶ್, ಜಿಪಂ ಅಭಿಯಂತರ ಮಲ್ಲಿಕಾರ್ಜುನ, ನೀರಾವರಿ ಇಲಾಖೆ ಅಭಿಯಂತರ ಕೃಷ್ಣ ಮೂರ್ತಿ, ಹಾರಂಗಿ ವಿಭಾಗದ ಅಭಿಯಂತರ ನವೀನ್, ಮುಖಂಡರಾದ ಆರ್.ಟಿ.ರೇವಣ್ಣ, ಮಂಜು ಆರ್.ಎಸ್, ಮಹಾದೇವ್, ಪರಮೇಶ್, ಪುನೀತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಆರ್.ಎಸ್.ಜವರೇಗೌಡ, ಮಹೇಶ್, ಸಿ.ತಮಣಯ್ಯ, ಪಿ.ಮಾದೇವ್, ಡಿ.ಎಸ್.ನಂದೀಶ್, ಕೀರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಅಕ್ಷರ ದಾಸೋಹ ಸಾಯಕ ನಿರ್ದೇಶಕ ಎಂ.ಸಿ. ಪ್ರಶಾಂತ್ ಇತರರು ಇದ್ದರು.