ಶ್ರೇಷ್ಠ ಕವಿತೆ ಹುಟ್ಟಿಗೆ ಪ್ರಾಮಾಣಿಕ ಪ್ರಯತ್ನ ಮುಖ್ಯ : ಪ್ರೊ.ನೀಲಗಿರಿ ಎಂ. ತಳವಾರ ಅಭಿಮತ

4
Published on

ಮೈಸೂರು: ಯಾವ ಕವಿತೆಯೂ ಅನಾಯಾಸವಾಗಿ ಹುಟ್ಟುವುದಿಲ್ಲ, ಯಾವುದೇ ಒಂದು ಶ್ರೇಷ್ಠ ಕವಿತೆ ಹುಟ್ಟಿಗೆ ಕವಿಯ ಪ್ರಾಮಾಣಿಕ ಪ್ರಯತ್ನವೂ ಮುಖ್ಯ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ ಅಭಿಪ್ರಾಯಪಟ್ಟರು.

ಕ್ರಿಯಾ ಅಭಿವ್ಯಕ್ತಿ ಸಂಘಟನೆಯಿಂದ ನಗರದ ಬೋಗಾದಿಯಲ್ಲಿರುವ ಕ್ರಿಯಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಡಾ.ನೀ.ಗೂ.ರಮೇಶ್ ಅವರ ಗಾಂಧೀಮರ ಸಂಕಲನದ ಕವಿತೆಗಳ ಓದು ಕಾರ್ಯಕ್ರಮದಲ್ಲಿ ಸಮನ್ವಯಕಾರರಾಗಿ ಅವರು ಮಾತನಾಡಿದರು.

ಗಾಂಧೀಮರ ಸಂಕಲನವು ಪ್ರಬುದ್ಧ ಕವಿತೆಗಳ ಸಂಕಲನವಾಗಿದ್ದು, ತನ್ನ ವೈಚಾರಿಕ ನಿಲುವುಗಳಿಂದಾಗಿ ವರ್ತಮಾನದ ಕಾವ್ಯದ ಸಂದರ್ಭದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ಸಮಕಾಲೀನ ಕವಿಗಳ ಕವಿತೆಗಳನ್ನು ಓದಿ, ಅರ್ಥೈಸಿ ಮುಂದಿನ ತಲೆಮಾರಿಗೆ ತಲುಪಿಸುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಒಂದು ಕವಿತೆಯ ಹುಟ್ಟಿನ ಹಿಂದೆ ಕವಿಯ ಮಹಾ ತಪಸ್ಸೇ ಇರುತ್ತದೆ. ಅಂತಹ ಕವಿತೆಗಳನ್ನು ಓದುವ ಪರಿಪಾಠವು ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೋರುತ್ತದೆ. ಕವಿತೆಯ ವಿಶೇಷ ಗುಣವೆಂದರೆ ಅದು ಕವಿ ಮತ್ತು ಓದುಗ ಇಬ್ಬರನ್ನೂ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಸಾಹಿತ್ಯದ ಬೇರೆಲ್ಲ ಪ್ರಕಾರಕ್ಕಿಂತ ಕಾವ್ಯ ಪ್ರಕಾರ ವಿಶೇಷವಾದದ್ದು. ಆದ್ದರಿಂದ, ಕವಿತೆ ಬರೆಯುವಷ್ಟೇ ಧ್ಯಾನಸ್ಥ ಸ್ಥಿತಿ ಕವಿತೆಯ ಓದಿಗೂ ಬೇಕಾಗುತ್ತದೆ. ಹಾಗಾಗಿ, ಕವಿಗೆ ಇರುವ ಧ್ಯಾನಸ್ಥ ಮನಸ್ಸು ಓದುಗನಿಗೂ ಇರಬೇಕಾದದ್ದು ಅಪೇಕ್ಷಣೀಯ ಎಂದು ಪ್ರತಿಪಾದಿಸಿದರು.

ಸಾಹಿತಿ ಟಿ.ಸತೀಶ್ ಜವರೇಗೌಡ ಮಾತನಾಡಿ, ಹೊಸ ಕೃತಿಯ ಪ್ರಕಟಣೆಯ ಸಂಭ್ರಮ ಕೇವಲ ಅದರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಆ ಹೊಸ ಕೃತಿಯ ಓದು, ಚರ್ಚೆ, ಸಂವಾದಗಳ ಮೂಲಕ ಅದು ಜನರನ್ನು ತಲುಪಬೇಕಾದ ಅಗತ್ಯವಿದೆ ಎಂದರು.

ಇತ್ತೀಚೆಗೆ ಕವಿತೆಯು ತನ್ನ ಭಾವ ಮತ್ತು ಭಾಷೆಯ ಸಂಕೀರ್ಣತೆಯ ಕಾರಣದಿಂದಾಗಿ ಸಹೃದಯರಿಂದ ದೂರವಾಗುತ್ತಿದೆ. ಆದ್ದರಿಂದ, ಮುದ್ರಣ ಮಾಧ್ಯಮದ ಪುರವಣಿಗಳು ಉತ್ತಮ ಪುಸ್ತಕಗಳನ್ನು ವಿಮರ್ಶಿಸುವ ಮತ್ತು ಪರಿಚಯಿಸುವಂತಹ ಕೆಲಸವನ್ನು ಈ ಮೊದಲಿನಂತೆಯೇ ಪ್ರೀತಿಯಿಂದ ಮುಂದುವರಿಸಬೇಕು. ಆಗ ಉತ್ತಮ ಪುಸ್ತಕಗಳು ಜನರಿಗೆ ಹತ್ತಿರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಲೇಖಕರಾದ ಡಾ.ಬಿ.ಸಿ.ದೊಡ್ಡೇಗೌಡ, ಪುನೀತ್ ಎಸ್.ಪಾಳೇಕರ್, ಮಂಜುಳಾ ಭದ್ರೇಗೌಡ, ರಶ್ಮಿ ಕೆ.ವಿಶ್ವನಾಥ್, ಎಂ.ಎಸ್. ಸಂಧ್ಯಾರಾಣಿ, ಕಿರಣ್ ಕುಮಾರ್ ದೇಸಾಯಿ, ಸ್ವಾಮಿ ಬಿ. ದಂಡಿನಕೆರೆ, ವಿ. ಶ್ರೀಧರ್, ಕೆ.ಜಿ.ಮನುಪ್ರಸಾದ್, ಆರ್. ಚಂದಿಕಾ, ಸಂಪತ್‌ಕಟ್ಟಿ ಇತರರು ಗಾಂಧೀಮರ ಸಂಕಲನದಲ್ಲಿನ ಕವಿತೆಗಳನ್ನು ಓದಿ ವಿಶ್ಲೇಷಿಸಿದರು.

ಕ್ರಿಯಾ ಸಂಸ್ಥೆಯ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಾಹಿತಿ ಡಾ.ಪಳನಿಸ್ವಾನಿ ಮುಡಗೂರು, ಸಾಹಿತಿ ಡಾ.ನೀ.ಗೂ.ರಮೇಶ್, ಕ್ರಿಯಾ ಅಭಿವ್ಯಕ್ತಿ ಸಂಘಟನೆಯ ಕುಮಾರ್, ಸುಪ್ರಿಯಾ ಶಿವಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net