

ಬಂಕಾಪುರ: ಸರ್ವ ಸಮುದಾಯದವರು, ಸೌಹಾರ್ದದಿಂದ ಕೂಡಿ ಆಚರಿಸುತ್ತಿರುವ ಹೊಂಡದ ದುರ್ಗಾದೇವಿ ಜಾತ್ರೆ ಎಲ್ಲರ ಜಾತ್ರೆಯಾಗಿ, ನಮ್ಮೂರ ಜಾತ್ರೆಯಾಗಿ ಹೊರಹೊಮ್ಮಿದೆ ಎಂದು ಡಾ.ಆರ್.ಎಸ್. ಅರಳೆಲೆಮಠ ಹೇಳಿದರು.
ಪಟ್ಟಣದ ಸುಂಕದಕೇರಿಯ ಶ್ರೀ ಹೊಂಡದ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ಗುರುವಾರ ಏರ್ಪಾಟಾಗಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ದುರ್ಗಾದೇವಿ ಜಾತ್ರೆ ಧರ್ಮ, ಸಂಸ್ಕೃತಿ, ನಾಟಕ, ಕಲೆಯ ಜತೆ ಉತ್ಸವ ಒಳಗೊಂಡಿರುವ ವಿಶೇಷ ಜಾತ್ರೆಯಾಗಿದೆ. ಇಲ್ಲಿ ಕೇವಲ ದೇವಿ ಆರಾಧನೆ ಮಾತ್ರವಲ್ಲದೆ, ಪಟ್ಟಣದ ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸುವ ಜಾತ್ರೆ ಇದಾಗಿದೆ ಎಂದರು.
ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಬಂಕಾಪುರ ಐತಿಹಾಸಿಕ ನಗರ. ಇಲ್ಲಿ ಅನೇಕ ಪ್ರಾಚೀನ ದೇವಾಲಯಗಳಿವೆ. ಅವುಗಳಲ್ಲಿ ಪ್ರಮುಖವಾಗಿರುವ ಹೊಂಡದ ದುರ್ಗಾದೇವಿ ದೇವಸ್ಥಾನವನ್ನೂ ಸ್ಥಳೀಯ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಜೀಣೋದ್ಧಾರ ಮಾಡಿ ಧಾರ್ವಿುಕ ಕೇಂದ್ರವನ್ನಾಗಿಸಿದ್ದಾರೆ. ಹೀಗಾಗಿ ಇದು ಎಲ್ಲ ಧರ್ಮದವರ ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ ಎಂದರು.
ಸವಣೂರ ಕಲ್ಮಠದ ಶ್ರೀ ಮಹಾಂತ ಮಹಾಸ್ವಾಮಿಗಳು, ಹಾವೇರಿ ಸಿಂದಗಿಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣಿ ಶಿವಯೋಗಿ ಮಹಾಸ್ವಾಮಿಗಳು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಖ್ಯಾತ ವೈದ್ಯರಾದ ಡಾ.ಆರ್.ಬಿ. ಮುಗದೂರ, ಡಾ.ಆರ್.ಎಸ್. ಅರಳೆಲೆಮಠ, ಡಾ.ಬಸವರಾಜ ನರೇಗಲ್, ಡಾ.ಎಂ.ಎ. ಪೀರಜಾದೆ, ಪಿಎಸ್ಐ ನಿಂಗರಾಜ ಕರಕಣ್ಣವರ, ಪರಶುರಾಮ ನಿರೋಳ್ಳಿ, ಡಿ.ಎನ್. ಕೂಡಲ, ಶಿವಾನಂದ ಅಜ್ಜನ್ನವರ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವಿರುಪಾಕ್ಷಪ್ಪ ಹುರಳಿ, ಸತೀಶ ಆಲದಕಟ್ಟಿ, ಸುರೇಶ ರಾಣೋಜಿ, ನೀಲಪ್ಪ ಕುರಿ, ಪಿ.ಎಂ. ಸತ್ಯಪ್ಪನವರ, ಬಿ.ಎಸ್. ಗಿಡ್ಡನ್ನವರ, ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಗಂಗೂಬಾಯಿ ದೇಸಾಯಿ ಹಾಗೂ ಬಸವರಾಜ ಸವೂರ ಕಾರ್ಯಕ್ರಮ ನಿರ್ವಹಿಸಿದರು.