

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ ನಾಲ್ಕೂರಿನ ಮಿಯಾರುಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭವಾಗಿ ಸೀತಾನದಿಗೆ ಅಡ್ಡಲಾಗಿ ನಿರ್ಮಿಸಲಾದ ನೂತನ ಸೇತುವೆ ತನಕದ ಸುಮಾರು 2 ಕಿ.ಮೀ. ರಸ್ತೆ ಹೊಂಡಗಳಿಂದ ಕೂಡಿದ್ದು, ಕಚ್ಚಾರಸ್ತೆಯಂತಾಗಿ ಸಂಚಾರವೇ ದುಸ್ತರವಾಗಿದೆ. ಮಳೆಯಿಂದ ಉಂಟಾದ ನೀರಿನ ರಭಸದ ಹರಿವಿಗೆ ಭಾರಿ ಗಾತ್ರದ ಹೊಂಡಗಳು ಬಾಯ್ತೆರೆದುಕೊಂಡಿದ್ದು, ದಿನನಿತ್ಯವೂ ವಾಹನಗಳು ಎದ್ದುಬಿದ್ದು ಸಂಚರಿಸುವುದು ಮಾಮೂಲಿಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಾಲ್ಕುಚಕ್ರದ ವಾಹನಗಳು ಮಾತ್ರವೇ ಸಂಚರಿಸಲು ಸಾಧ್ಯವಿದ್ದು, ದ್ವಿಚಕ್ರ ವಾಹನಗಳು, ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಿಲ್ಲದಂತಹ ದುಸ್ಥಿತಿ ಇದೆ. ಯಾವ್ಯಾವ ಊರಿಗೆ ಸಂಪರ್ಕ?: ಈ ರಸ್ತೆಯು ಸೂರ್ಗೋಳಿ, ತಾರೀಕಟ್ಟೆ, ಬೆಳ್ವೆ, ಗೋಳಿಯಂಗಡಿ, ಹಿಲಿಯಾಣ, ಗುಮ್ಮೊಲ ಸಹಿತ ಹಲವು ಊರುಗಳನ್ನು ಸಂಪರ್ಕಿಸುತ್ತದೆ. ಸುತ್ತಮುತ್ತಲ ಗ್ರಾಮಸ್ಥರಿಗೆ ಇದೇ ಪ್ರಮುಖ ರಸ್ತೆಯಾಗಿದ್ದು, ವರ್ಷದಿಂದ ವರ್ಷಕ್ಕೆ ರಸ್ತೆ ಪರಿಸ್ಥಿತಿ ಹದಗೆಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಡಾಮರ ಕಂಡು ದಶಕಗಳೇ ಉರುಳಿದ್ದು, ಅದರ ಕುರುಹು ಕೂಡ ಇಲ್ಲವಾಗಿದೆ. ಇನ್ನಾದರೂ ಸಂಬಂಧಿಸಿದವರು ಈ ರಸ್ತೆ ದುರಸ್ತಿಗೊಳಿಸುವತ್ತ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಸಮಸ್ಯೆಯ ಕುರಿತು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ದುರಸ್ತಿ ಕಾರ್ಯ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಲಾಗವುದು. ಯಶ್‌ಪಾಲ್ ಎ.ಸುವರ್ಣ, ಶಾಸಕ
ಮಿಯಾರುಬೆಟ್ಟುವನಿಂದ ಹೊಸ ಸೇತುವೆಯ ತನಕದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮಳೆಗಾಲ ಮುಗಿದ ಕೂಡಲೇ ಈ ರಸ್ತೆ ದುರಸ್ತಿಗೆ ಪಂಚಾಯಿತಿ ಮಟ್ಟದಲ್ಲಿ ಪ್ರಯತ್ನಿಸಲಾಗುವುದು.ಸಂಬಂಧಪಟ್ಟ ಇಲಾಖೆಗೂ ಮನವಿ ಮಾಡಲಾಗುವುದು. ಶೋಭಾ ಕೆ.ಪೂಜಾರಿ. ಅಧ್ಯಕ್ಷೆ, ನಾಲ್ಕೂರು ಗ್ರಾ.ಪಂ. https://www.vijayavani.net/retired-government-employees-association-meeting-teachers-day-celebration https://www.vijayavani.net/traffic-chaos-in-jantra