

ಹುಬ್ಬಳ್ಳಿ : ಇಲ್ಲಿಯ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಏ. 9 ರಿಂದ 13ರವರೆಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷೆ ದೇವಕಿ ಜಿ., 8 ಜಿಲ್ಲೆಗಳ 40 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೇ 36 ತಂಡಗಳು ನೋಂದಣಿ ಮಾಡಿಕೊಂಡಿವೆ. ಪುರುಷರಿಗೆ 10 ಓವರ್ನ ಟೆನ್ನಿಸ್ ಬಾಲ್ ಪಂದ್ಯ ಹಾಗೂ ಮಹಿಳೆಯರಿಗೆ (ವೃತ್ತಿ ಪರ ಆಟಗಾರ್ತಿಯರು) 20 ಓವರ್ನ ಲೆದರ್ ಬಾಲ್ ಪಂದ್ಯ ನಡೆಯಲಿದೆ ಎಂದರು.
ಶಿವಮೊಗ್ಗ, ಹಾಸನ, ವಿಜಯಪುರ ಮತ್ತು ಹುಬ್ಬಳ್ಳಿಯಿಂದ ನಾಲ್ಕು ಮಹಿಳಾ ತಂಡಗಳು ಭಾಗವಹಿಸಿ, ರಾಣಿಚನ್ನಮ್ಮ ಕಪ್ಗೆ ಸೆಣಸಲಿವೆ ಎಂದು ಹೇಳಿದರು.
ಪೊಲೀಸ್ ಕಮಿಷನರ್, ಮಹಾನಗರ ಪಾಲಿಕೆ, ಮಾಧ್ಯಮ, ಕನ್ಸ್ಟ್ರಕ್ಸನ್, ವೈದ್ಯರ, ನ್ಯಾಯವಾದಿಗಳ, ಸ್ಮಾರ್ಟ್ಸಿಟಿ ಸೇರಿ ವಿವಿಧ ತಂಡಗಳೊಂದಿಗೆ ಸಿವಿಲ್ ಇಂಜಿನಿಯರ್ಸ್ನ 16 ತಂಡಗಳು ಪಂದ್ಯ ಆಡಲಿವೆ ಎಂದು ತಿಳಿಸಿದರು.
ಏ. 9ರಂದು ಬೆಳಗ್ಗೆ 9ಗಂಟೆಗೆ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಮೇಯರ್ ರಾಮಪ್ಪ ಬಡಿಗೇರ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಬಾಬಾ ಭೂಸದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಸೋಸಿಯೇಶನ್ ಪದಾಧಿಕಾರಿಗಳಾದ ಕಾಟೆವಾಡೆ ಎಂ.ಎ., ಮೌನೇಶ ರಟ್ಟಿಹಳ್ಳಿ, ಬಸವರಾಜ ಮದನಶೆಟ್ಟಿ, ಅಶೋಕ ಬಸವ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.