ಹೋಮಿಯೋಪಥಿಯಲ್ಲಿ ಸಂಶೋಧನೆ ನಡೆಯಲಿ

pda (6)
Published on

ಕಲಬುರಗಿ: ಭಾರತದಲ್ಲಿ ಹೋಮಿಯೋಪಥಿಕ್ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದು, ವಿದ್ಯಾರ್ಥಿಗಳು ಪದವಿ ಪಡೆದ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗುವ ಜತೆಗೆ ಸಂಶೋಧನೆಗೂ ಆದ್ಯತೆ ನೀಡಬೇಕು ಎಂದು ಕೇಂದ್ರದ ಆಯುಷ್ ಇಲಾಖೆಯ ರಾಷ್ಟ್ರೀಯ ಹೋಮಿಯೋಪಥಿಕ್ ಆಯೋಗದ ಕಾರ್ಯದರ್ಶಿ ಡಾ.ಸಂಜಯ ಗುಪ್ತಾ ಹೇಳಿದರು.

ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಮಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ರಾಷ್ಟ್ರೀಯ ಹೋಮಿಯೋಪಥಿಕ್ ಆಯೋಗವೂ ತನ್ನ ನೂತನ ನೀತಿಯಲ್ಲಿ ಸಂಶೋಧನೆ, ಆವಿಷ್ಕಾರ, ಪ್ರಯೋಗಗಳಿಗೆ ಆದ್ಯತೆ ನೀಡಿದೆ ಎಂದು ಹೇಳಿದರು.

ಪದವಿ ಪಡೆದ ನಂತರ ಜೀವನದ ನಿಜವಾದ ಸವಾಲು ಎದುರಾಗಲಿದೆ. ಪರಿಪೂರ್ಣ ಸಿದ್ಧತೆಯನ್ನು ಮಾಡಿಕೊಂಡು ಚಿಕಿತ್ಸೆ ನೀಡಬೇಕು. ನಿರಂತರವಾಗಿ ಹೊಸ ವಿಷಯಗಳನ್ನು ಅರಿಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಪ್ರಯೋಗಗಳನ್ನು ಮಾಡಿ, ಯಶಸ್ವಿಯಾದವರಿಗೆ ಬೆಲೆ ಇದೆ. ಆದ್ದರಿಂದ ನಿಮ್ಮ ಶಕ್ತಿ, ಸಾಮರ್ಥ್ಯ, ಕೌಶಲವನ್ನು ಸದ್ಬಳಕೆ ಮಾಡಿಕೊಂಡು ಹೋಮಿಯೋಪಥಿಕ್ ಕ್ಷೇತ್ರದಲ್ಲಿ ಸೇವೆಗೆ ಅಣಿಯಾಗಬೇಕು ಎಂದು ಸಲಹೆ ನೀಡಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ನಿಯಮಗಳು ಬದಲಾಗುತ್ತಲೇ ಇವೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಅವಕಾಶಗಳ ಆಗರವೇ ಇದೆ. ಪ್ರಸ್ತುತ ಜನರು ಹೋಮಿಯೋಪಥಿ, ಆಯುರ್ವೇದದತ್ತಲೂ ಜನರು ಬರುತ್ತಿದ್ದಾರೆ. ಅಸ್ತಮಾ, ಅರ್ಥರೈಟಿಸ್ ಸೇರಿ ಹಲವು ಗಂಭೀರ ರೋಗಗಳಿಗೆ ಪರಿಣಾಮಕಾರಿಯಾಗಿ ಹೋಮಿಯೋಪಥಿಯಲ್ಲಿ ಚಿಕಿತ್ಸೆ ಇದೆ ಎಂದು ಹೇಳಿದರು.

ಹೈಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಶರಣಬಸಪ್ಪ ಆರ್.ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರ, ಆಡಳಿತ ಮಂಡಳಿ ಸದಸ್ಯರಾದ ಡಾ.ಕೈಲಾಶ ಬಿ.ಪಾಟೀಲ್, ಡಾ.ಶರಣಬಸವಪ್ಪ ಕಾಮರೆಡ್ಡಿ, ಸಾಯಿನಾಥ ಎನ್.ಪಾಟೀಲ್, ಡಾ.ನಾಗೇಂದ್ರ ಮಂಠಾಳೆ, ಅರುಣಕುಮಾರ ಎಂ.ಪಾಟೀಲ್, ಬಸವರಾಜ ಖಂಡೇರಾವ, ವಿನಯ ಎಸ್.ಪಾಟೀಲ್, ಸೋಮನಾಥ ಸಿ.ನಿಗ್ಗುಡಗಿ, ಡಾ.ಅನೀಲಕುಮಾರ ಪಟ್ಟಣ, ರಜನೀಶ ಎಸ್.ವಾಲಿ, ಡಾ.ವೀರೇಂದ್ರ ಪಾಟೀಲ್, ಕಾಲೇಜಿನ ಡೀನ್‌ಗಳು, ಉಪನ್ಯಾಕರು ಇತರರಿದ್ದರು. ಪ್ರಾಂಶುಪಾಲ ಎಸ್.ಎಸ್.ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಂಗಮ್ಮ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net