

ಹೊಳೆಹೊನ್ನೂರು: ಸಮೀಪದ ಬಿಕ್ಕೋನಹಳ್ಳಿ-ಬೀರನಕೆರೆ ಮಧ್ಯದ ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಬಳಿ 6 ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ.
ಬಿಕ್ಕೋನಹಳ್ಳಿ ಗ್ರಾಮದಲ್ಲಿ ಹತ್ತು ದಿನಗಳ ಹಿಂದೆ ರೈತ ಮಹಿಳೆ ಯಶೋದಮ್ಮ ಚಿರತೆ ದಾಳಿಗೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದ 5-6 ಕಡೆಗಳಲ್ಲಿ ಬೋನು ಇಟ್ಟು ಸೆರೆ ಹಿಡಿಯಲು ಮುಂದಾಗಿದ್ದರು. ಮಹಿಳೆ ಬಲಿಯಾದ ಒಂದು ಕಿಮೀ ದೂರದಲ್ಲಿಟ್ಟಿದ್ದ ಬೋನಿಗೆ ಚಿರತೆ ಶುಕ್ರವಾರ ಸಂಜೆ ಸೆರೆ ಸಿಕ್ಕಿದೆ. ಇದೇ ಚಿರತೆ ರೈತ ಮಹಿಳೆಯನ್ನು ಕೊಂದು ತಿಂದಿದ್ದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದಂತೆ ಚಿರತೆ ನೋಡಲು ಸುತ್ತಮುತ್ತಲಿನ ಹಳ್ಳಿಗಳ ನೂರಾರು ಜನ ಸೇರಿದ್ದರು. ಕೆಲ ಕಾಲ ಬಿಕ್ಕೋನಹಳ್ಳಿಯಲ್ಲಿ ಗ್ರಾಮಸ್ಥರ ದರ್ಶನಕ್ಕಾಗಿ ಇಡಲಾಗಿತ್ತು. ಆಗ ಗ್ರಾಮಸ್ಥರು ಚಿರತೆಯನ್ನು ಇಲ್ಲಿಯೇ ಸಾಯಿಸಬೇಕೆಂದು ಪಟ್ಟುಹಿಡಿದರು. ಆದರೆ ಅರಣ್ಯಾಧಿಕಾರಿಗಳು ಹಾಗೆಲ್ಲ ಮಾಡಲು ಬರುವುದಿಲ್ಲ ಎಂದು ಹೇಳಿ ಸಮಾಧಾನಪಡಿಸಿದರು.
ಕಲ್ಲುಗಂಗೂರಿನಿಂದ ಕುಂಚೇನಹಳ್ಳಿವರೆಗೆ 17 ಕಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳ ಬಹುತೇಕ ಕಡೆಗಳಲ್ಲಿ ಸೆರೆಯಾಗಿರುವುದು ಇದೇ ಚಿರತೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದರು. ಹೊಳಲೂರು ಸಮೀಪದ ಕ್ಯಾತಿನಕೊಪ್ಪ, ಹಾಲದಹಳ್ಳಿ, ಸೋಮಿನಕೊಪ್ಪ ಗ್ರಾಮಗಳ 4-5 ಕಿಮೀ ವ್ಯಾಪ್ತಿಯಲ್ಲಿ 5 ಚಿರತೆಗಳು ಸೆರೆ ಸಿಕ್ಕಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಬಿಕ್ಕೋನಹಳ್ಳಿ ಬಳಿ 1, ಆಲದಹಳ್ಳಿಯಲ್ಲಿ 2, ಕ್ಯಾತಿನಕೊಪ್ಪ ಸಮೀಪ 2 ಸೇರಿ ಈವರೆಗೆ 5 ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಸಿದ್ದರಬೆಟ್ಟ ಕಾಡಿನಲ್ಲಿ ಚಿರತೆಗಳಿರುವ ಬಗ್ಗೆ ಸಾರ್ವಜನಿಕರು ಹಲವು ದಿನಗಳಿಂದ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾತಿನಕೊಪ್ಪ, ಬೀರನಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಅಡಕೆ ತೋಟಗಳಲ್ಲೂ ಚಿರತೆಗಳ ಹೆಜ್ಜೆ ಗುರುತುಗಳು ಕಾಣಿಸುತ್ತಿವೆ. ಕಾಡಂಚಿನ ಜಮೀನುಗಳಿಗೆ ತೆರಳಲು ರೈತರು ಭಯಪಡುತ್ತಿದ್ದಾರೆ.