

ಮಡಿಕೇರಿ:
ಕೊಡಗಿನ ಬಹುತೇಕ ಊರುಗಳಲ್ಲಿ ಹೋಮ್ ಸ್ಟೇ ದೊಡ್ಡ ವ್ಯವಹಾರವಾಗಿ ಬೆಳೆದು ನಿಂತಿದೆ. ಹೋಮ್‌ಸ್ಟೇಗೆ ಇರುವ ವಿನಾಯಿತಿಗಳ ಲಾಭ ಪಡೆದುಕೊಂಡು ರೆಸಾರ್ಟ್ ವ್ಯವಹಾರ ಮಾಡುವವರೂ ಇದ್ದಾರೆ. ಇದೀಗ ಹೋಮ್‌ಸ್ಟೇ ನಡೆಸುವವರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಕೊಡುವ ಬಗ್ಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲೂ ಪ್ರಸ್ತಾಪ ಆಗಿದೆ. ಈ ಬೆನ್ನಲ್ಲೇ ಅಡ್ಡಾದಿಡ್ಡಿ ಬೆಳೆಯುತ್ತಿರುವ ಹೋಮ್‌ಸ್ಟೇಗಳಿಗೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ.
ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ನಾಗಲೋಟದಲ್ಲಿದೆ. ಹಾಗಾಗಿ ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಹುರುಪು ಕಂಡು ಬಂದಿದ್ದು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತಂಗುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಪ್ರತಿ ಊರಿನಲ್ಲೂ ಕಲ್ಲಿಸಲಾಗುತ್ತಿದೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ ಸವಿಯಲು ಮತ್ತು ಸುಂದರ ತಾಣಗಳನ್ನು ವೀಕ್ಷಿಸಲು ಭೇಟಿ ಕೊಡುವವರಿಗೆ ಆತಿಥ್ಯ ನೀಡುವ ಸಲುವಾಗಿ ಹೋಮ್‌ಸ್ಟೇಗಳನ್ನು ಆರಂಭಿಸುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ.
ಪ್ರವಾಸಿಗರ ಸಂಖ್ಯೆ ಇಳಿಮುಖ ಆಗಿದ್ದ ಕಾರಣಕ್ಕೆ ಪ್ರಾಕೃತಿಕ ವಿಕೋಪ ಮತ್ತು ನಂತರದ ಕೊರೊನಾ ಕಾಲದಲ್ಲಿ ಶೇ.60ಕ್ಕೂ ಅಧಿಕ ಹೋಮ್‌ಸ್ಟೇಗಳು ಬಾಗಿಲು ಮುಚ್ಚಿದ್ದವು. ಬಾಡಿಗೆಗೆ ಮನೆಗಳನ್ನು ಪಡೆದುಕೊಂಡು ಆತಿಥ್ಯದ ಮನೆಗಳನ್ನು ನಡೆಸುತ್ತಿದ್ದವರು ಬಾಡಿಗೆ ಸೇರಿದಂತೆ ನಿರ್ವಹಣಾ ವೆಚ್ಚ ಭÀರಿಸುವುದಕ್ಕೂ ಪರದಾಡುವಂತಾಗಿತ್ತು. ಇದರಿಂದಾಗಿ ಹೋಮ್‌ಸ್ಟೇಗಳ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಪ್ರವಾಸೋದ್ಯಮಿಗಳು ಬೇಸತ್ತಿದ್ದರು.
ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಏರುಗತಿಯಲ್ಲಿದೆ. ಪ್ರವಾಸಿ ಸೀಸನ್‌ಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚು ಇರುತ್ತದೆ. 2024ರ ದಸರಾ ರಜೆಯ ದಿನಗಳು ವರ್ಷಾಂತ್ಯದ ಅವಧಿ ಹಾಗೂ 2025ರ ಹೊಸ ವರ್ಷದ ಆರಂಭದ ದಿನಗಳಲ್ಲಂತೂ ಜಿಲ್ಲೆಯ ಪ್ರವಾಸಿತಾಣಗಳು ಗಿಜಿಗುಡುತ್ತಿದ್ದವು. ಇದೀಗ ಮಾರ್ಚ್ ನಂತರ ಪ್ರವಾಸಿ ಸೀಸನ್ ಶುರುವಾಗುತ್ತಿದ್ದು, ಇದೇ ದೃಶ್ಯ ಪುನಾವರ್ತನೆ ಆಗುವ ಸಾಧ್ಯತೆಗಳು ಅಧಿಕವಾಗಿದೆ.
ಬಹುತೇಕ ಪರೀಕ್ಷೆಗಳು ಮುಗಿಯುವ ಕಾರಣದಿಂದ ಮಾರ್ಚ್ ಅಂತ್ಯದಿAದಲೇ ವಾರದ ದಿನಗಳು ಮಾತ್ರವಲ್ಲದೇ ವಾರಾಂತ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗುವ ನಿರೀಕ್ಷೆ ಇದೆ . ವೀಕೆಂಡ್‌ಗೆ ಹೊಂದಿಕೊAಡAತೆ ರಜಾ ದಿನಗಳು ಇದ್ದರಂತೂ ಪ್ರವಾಸಿ ತಾಣಗಳು ತುಂಬಿ ಹೋಗಿರುತ್ತದೆ. ಇಂಥ ಸಂದರ್ಭದಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ಸ್ಥಳಗಳೇ ಸಿಗದಂತಾಗುವ ಪರಿಸ್ಥಿತಿ ಇರುತ್ತದೆ.
ಮೇ ಅಂತ್ಯದ ತನಕವೂ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆ ಬಗ್ಗೆ ಪ್ರವಾಸೋದ್ಯಮಿಗಳು ನಿರೀಕ್ಷೆ ಹೊಂದಿದ್ದಾರೆ. ಇಂಥ ನಿರೀಕ್ಷೆಗಳು ಇರುವುದರಿಂದಲೇ ಕೊಡಗಿನಲ್ಲಿ ಯಾವ ಊರಿಗೆ ಹೋದರೂ ಹೋಮ್‌ಸ್ಟೇಗಳು ಸಾಮಾನ್ಯ ಎಂಬAತಾಗಿದೆ. ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಇಲಾಖೆಯಿಂದ ಅನುಮೋದನೆ ಪಡೆದಿರುವ ಹೋಮ್‌ಸ್ಟೇಗಳ ಸಂಖ್ಯೆಗಿAತ 5 ಪಟ್ಟು ಅಧಿಕ ಹೋಮ್‌ಸ್ಟೇಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ.
ಹೊಸದಾಗಿ ಆರಂಭವಾಗಿರುವ ಬಹುತೇಕ ಹೋಮ್‌ಸ್ಟೇಗಳು ಇನ್ನು ಕೂಡ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿಲ್ಲ. ಆತಿಥ್ಯದ ಮನೆಗಳನ್ನು ನಡೆಸಲು ಪ್ರವಾಸೋದ್ಯಮ ಇಲಾಖೆ ಸಾಕಷ್ಟು ನಿಯಮಗಳನ್ನು ರೂಪಿಸಿದ್ದು, ಸುರಕ್ಷತೆಗೆ ಆದ್ಯತೆ ಕೊಡಲಾಗಿರುತ್ತದೆ. ಬೇಕಾಬಿಟ್ಟಿ ಹುಟ್ಟಿಕೊಳ್ಳುತ್ತಿರುವ ಹೋಮ್‌ಸ್ಟೇಗಳಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆ ಉಂಟಾಗುವAತಹ ಸಾಧ್ಯತೆಗಳು ಇರುವದುರಿಂದ ಕಡ್ಡಾಯವಾಗಿ ನೋಂದಣಿ ಮಾಡಿಸಲು ಸೂಚಿಸಿದರೂ ನಿರ್ಲಕ್ಷö್ಯ ಕಂಡುಬರುತ್ತಿದೆ.
ಹಾಗಾಗಿ ಅನಧಿಕೃತವಾಗಿ ಕಾರ್ಯಾಚರಿಸುವ ಆತಿಥ್ಯದ ಮನೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನ ಸಿಕ್ಕಿಲ್ಲ.
ಮತ್ತೊಂದು ಕಡೆ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುವ ಮೂಲಕ ಉದ್ಯೋಗÀ ಸೃಷ್ಟಿಗೆ ಒತ್ತುಕೊಟ್ಟಿರುವ ಕೇಂದ್ರ ಸರ್ಕಾರ ಹೋಮ್ ಸ್ಟೇಗಳಿಗೆ ಮುದ್ರಾ ಯೋಜನೆ ಅಡಿ ಸಾಲ ಕೊಡುವ ಬಗ್ಗೆ ಈ ವರ್ಷದ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಇದು ಕೊಡಗು ಮತ್ತು ಚಿಕ್ಕಮಗಳೂರಿನಂಥ ಹೆಚ್ಚು ಹೋಮ್‌ಸ್ಟೇಗಳನ್ನು ಹೊಂದಿರುವ ಮಲೆನಾಡಿನ ಜಿಲ್ಲೆಗಳ ಪಾಲಿಗೆ ಖುಷಿಯ ಸುದ್ದಿಯೇ ಆಗಿದೆ. ಆದರೆ ಈ ಬೆನ್ನಲ್ಲೇ ರಾಜ್ಯ ಸರ್ಕಾರದ ಹೇಳಿಕೆ ಅನಧಿಕೃತ ಹೋಮ್ ಸ್ಟೇ ನಡೆಸುವವರ ಪಾಲಿಗೆ ಕಂಟಕವಾಗುವ ಎಲ್ಲಾ ಸಾಧ್ಯತೆ ಇದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳನ್ನು ಸರ್ವೇ ಮಾಡಿ ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿ ಇರುವ ಬಗ್ಗೆ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ ಮಾಹಿತಿ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಹೋಮ್‌ಸ್ಟೇಗಳ ಸರ್ವೇ ಮಾಡುತ್ತಿವೆ. ಹೋಮ್‌ಸ್ಟೇಗಳಗೆ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ಎರಡೂ ಇಲಾಖೆಗಳು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತಿವೆ ಎನ್ನುತ್ತಾರೆ ಸಚಿವ ಹೆಚ್.ಕೆ. ಪಾಟೀಲ.
ಪ್ರವಾಸೋದ್ಯಮ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೋಮ್‌ಸ್ಟೇಗಳು ಪ್ರವಾಸಿಗರಿಗೆ ಆತಿಥ್ಯ ನೀಡುವ ಕೆಲಸ ಮಾಡುತ್ತಿವೆ. ಅದರಲ್ಲೂ ಬಹುಪಾಲು ಹೋಮ್‌ಸ್ಟೇಗಳು ಕೊಡಗು, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿವೆ. ಆದ್ರೆ ಇವುಗಳಲ್ಲಿ ಬಹುತೇಕ ಆತಿಥ್ಯದ ಮನೆಗಳನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ. ಇದೀಗ ನಡೆಸಲಾಗುತ್ತಿರುವ ಸರ್ವೇ ಮತ್ತು ಪರಿಶೀಲನಾ ಕಾರ್ಯದಿಂದ ಇಂಥ ಹೋಮ್‌ಸ್ಟೇಗಳ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.
ನೋಂದಣಿಗೆ ಏನು ಬೇಕು ?
- ಮಾಲೀಕರ ಫೋಟೋ
- ಮಾಲೀಕರ ಆಧಾರ್ ಕಾರ್ಡ್
- ಮನೆ ಆರ್‌ಟಿಸಿ/ನಮೂನೆ 3
- ಹೋಮ್‌ಸ್ಟೇ 4 ಫೋಟೋಗಳು
- ಪೊಲೀಸ್ ನಿರಾಕ್ಷೇಪಣಾ ಪತ್ರ
- ಪಂಚಾಯತ್/ನಗರಸಭೆ ನಿರಾಕ್ಷೇಪಣಾ ಪತ್ರ
- ಶುಲ್ಕ ರೂ. 500 (5 ವರ್ಷಕ್ಕೆ)
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳನ್ನು ಸರ್ವೇ ಮಾಡಿ ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿ ಇದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಹೋಮ್‌ಸ್ಟೇಗಳ ಸರ್ವೇ ಕಾರ್ಯ ನಡೆಸುತ್ತಿವೆ. ಹೋಮ್‌ಸ್ಟೇಗಳಗೆ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ಎರಡೂ ಇಲಾಖೆಗಳು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತಿವೆ. ಇದರಿಂದ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹೋಮ್‌ಸ್ಟೇಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
ಹೆಚ್.ಕೆ. ಪಾಟೀಲ, ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ಒತ್ತಡ ಹೆಚ್ಚಾಗಿ ಕಂಡು ಬರುತ್ತಿದೆ. ಹೋಮ್ ಸ್ಟೇ, ರೆಸಾರ್ಟ್ಗಳು ಭರ್ತಿ ಆಗುತ್ತಿದೆ. ಮತ್ತಷ್ಟು ಹೊಸ ಹೋಮ್‌ಸ್ಟೇಗಳು ತಲೆ ಎತ್ತುತ್ತಿದ್ದು, ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಹೊಸ ಹೋಮ್‌ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೋಮ್ ಸ್ಟೇ ನಡೆಸುತ್ತಿರುವವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಸಿ.ಎಲ್. ವಿಶ್ವ, ಪ್ರವಾಸೋದ್ಯಮಿ, ದುಬಾರೆ