

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಣಂಬೂರು ಘಟಕದ ವತಿಯಿಂದ ಶ್ರೀ ನಂದನೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಭಾನುವಾರ ಜರುಗಿತು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರವಾಗಿ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇ ದಿನೇ ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಂಡು ಗಿಡ ನೆಟ್ಟು ಪೋಷಿಸಿ, ಕಾಡು ಉಳಿಸಬೇಕು. ಪರಿಸರದ ಅಸಮತೋಲನವಾಗದಂತೆ ನೋಡಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಈ ವರ್ಷದಲ್ಲಿ ಸುಮಾರು 1000 ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗಿಡ ನೆಟ್ಟು ಹಸಿರು ಬೆಳೆಸಿದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿಗಳನ್ನು ನೆಡುವ ಕಾರ್ಯ ಯೋಜನೆ ಸಿದ್ದಪಡಿಸಲಾಗಿದೆ ಎಂದರು.
ದೇವಸ್ಥಾನದ ಆವರಣದಲ್ಲಿ ಬಿಲ್ವ ಪತ್ರೆ, ಮಾವು, ನೇರಳೆ, ಪೇರಳೆ, ಹಲಸು, ಹೆಬ್ಬಲಸು ಮುಂತಾದ ಗಿಡಗಳನ್ನು ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ದೇವಳದ ಗಣಪತಿ ಐತಾಳ, ಮಾಜಿ ಘಟಕಾಧಿಕಾರಿ ಹರೀಶ್ ಆಚಾರ್ಯ, ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ, ಹಿರಿಯ ಗೃಹ ರಕ್ಷಕರಾದ ಜಗದೀಶ್, ಗಂಗಾಧರ ಮತ್ತು ಪಣಂಬೂರು ಘಟಕದ ಎಲ್ಲಾ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು.