ಫೆ.22ರಂದು 'ಹೊಂಬೆಳಕು' ಕ್ರೀಡೋತ್ಸವ ಸ್ಪರ್ಧೆ

Bhandari Lead
Published on

ವಿಪ ಸದಸ್ಯ ಮಂಜುನಾಥ್​ ಭಂಡಾರಿ ಮಾಹಿತಿ

ಮಂಗಳೂರು ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಗ್ರಾಮ ಸ್ವರಾಜ್​ ಪತ್ರಿಷ್ಠಾನ (ರಿ.) ವತಿಯಿಂದ ದಕ್ಷಿಣ ಕನ್ನಡ-ಉಡುಪಿ ಜಿಪಂ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಗರ, ಸ್ಥಳೀಯಾಡಳಿತದ ಚುನಾಯಿತ ಜನಪ್ರತಿನಿಧಿ ಹಾಗೂ ಸಿಬ್ಬಂದಿಗೆ ಫೆ.22 ರಂದು ಮಂಗಳೂರಿನ ಅಡ್ಯಾರ್​ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಹೊಂಬೆಳಕು-2025 ಸ್ಥಳೀಯಾಡಳಿತ ಸಂಭ್ರಮ ಎಂಬ ಕ್ರೀಡೋತ್ಸವ-ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್​ ಭಂಡಾರಿ ಮಾಹಿತಿ ನೀಡಿದರು.

ಉಡುಪಿಯ ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೊಂಬೆಳಕು ಸ್ಥಳೀಯಾಡಳಿತ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಿಯಾಂಕ್​ ಖರ್ಗೆ ಉದ್ಘಾಟನೆ

Priyank
ಪ್ರಿಯಾಂಕ್ ಖರ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಪ್ರಿಯಾಂಕ್​ ಖರ್ಗೆ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ದ.ಕ., ಉಡುಪಿ ಜಿಲ್ಲೆಯ ಪಂಚಾಯಿತಿ, ನಗರ, ಸ್ಥಳೀಯಾಡಳಿತದ 6,500ಕ್ಕೂ ಹೆಚ್ಚು ಚುನಾಯಿತ ಜನಪ್ರತಿನಿಧಿಗಳು ಹಾಗೂ 2 ಸಾವಿರ ಸಿಬ್ಬಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಬಿ.ಸಿ. ಚಂದ್ರಶೇಖರ್​ ಕ್ರೀಡಾಜ್ಯೋತಿ ಸ್ವೀಕರಿಸಿ, ಪಥಸಂಚಲನಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್​ ತಂಗಡಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಜುನಾಥ್​ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪೀಕರ್​ ಯು.ಟಿ. ಖಾದರ್​, ಸಚಿವ ದಿನೇಶ್​ ಗುಂಡೂರಾವ್​ ಸೇರಿದಂತೆ ಅನೇಕ ಸಚಿವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಸಾದ್​ರಾಜ್​ ಕಾಂಚನ್​, ಅಶೋಕಕುಮಾರ್​ ಕೊಡವೂರು, ರಾಜು ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ, ರೋಶಿನಿ ವಲಿವೇರಾ ಇತರರಿದ್ದರು.

ಎಲ್ಲ ಜಿಲ್ಲೆಗಳಲ್ಲೂ ಆಯೋಜನೆ ಸಾಧ್ಯತೆ

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಯಲ್ಲಿ ವಿಸ್ತರಿಸಲು ಈ ಕ್ರೀಡಾ ಸ್ಪರ್ಧೆಯನ್ನು ಪೈಲೆಟ್​ ಕಾರ್ಯಕ್ರಮವನ್ನಾಗಿ ಆಯೋಜಿಸುವಂತೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕ್ರೀಡಾಕೂಟ ನಡೆಯುವ ಸಾಧ್ಯತೆ ಇದೆ ಮಂಜುನಾಥ್​ ಭಂಡಾರಿ ಮಾಹಿತಿ ನೀಡಿದರು.

ಈ ಹಿಂದೆ ವಿಧಾನ ಪರಿಷತ್​ ಸದಸ್ಯರಾಗಿದ್ದ ಕೋಟ ಶ್ರೀನಿವಾಸ್​ ಪೂಜಾರಿ ಅವರು ಈ ಕ್ರೀಡಾ ಕಾರ್ಯಕ್ರಮ ಆರಂಭಿಸಿದ್ದರು. ನಾನು ಪರಿಷತ್​ ಸದಸ್ಯನಾದ ಬಳಿಕ ದ.ಕ. ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುವಂತೆ ಗ್ರಾಪಂ ಸಿಬ್ಬಂದಿ, ಜನಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದರು. ಹೀಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ರೀಡಾಕೂಟಕ್ಕೆ ಸುಮಾರು 75 ಲಕ್ಷ ರೂ. ವೆಚ್ಚವಾಗಲಿದೆ. | ಮಂಜುನಾಥ್​ ಭಂಡಾರಿ. ವಿಪ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net