ಅಂತಾರಾಜ್ಯ ಕಳ್ಳರ ಬಂಧನ

home 1
Published on

ಉಡುಪಿ: 76 ಬಡಗುಬೆಟ್ಟು ಗ್ರಾಮದ ಮಿಷನ್​ ಕಾಂಪೌಂಡ್​ ಪಿಡ್ಯೂಡಿ ಕ್ವಾಟ್ರೆಸ್​ನಲ್ಲಿ ಶನಿವಾರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ಧಾರ್​ ಜಿಲ್ಲೆಯ ನಿವಾಸಿಗಳಾದ ರಮೇಶ್​ ಜವಾನ್​ ಸಿಂಗ್​(37), ಕಾಲಿಯಾ ಅಲಿಯಾಸ್​ ಕಾಲು(25) ಬಂಧಿತರು. ಆರೋಪಿಗಳಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್​ಲೈಟ್​ ಸೇರಿ ಒಟ್ಟು 80,970 ರೂ. ಮೌಲ್ಯದ ಒಟ್ಟು 681.830 ಮಿಲಿ ಗ್ರಾಂನ ಬೆಳ್ಳಿಯ ಸೊತ್ತು, 4,250 ರೂ. ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಸರ್ಕಾರಿ ವಸತಿ ಗೃಹದ ಸೌರ್ಪಣಿಕ ಬಿ ಬ್ಲಾಕ್​ನಲ್ಲಿದ್ದ ಮನೆಗೆ ನುಗ್ಗಿದ್ದ ಕಳ್ಳರು 40 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ- , 20 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ-, 30 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಸೊಂಟದ ನೇವಳ-, 20 ಗ್ರಾಂನ ಒಂದು ಜೊತೆ ಬೆಳ್ಳಿಯ ಕೈಬಳೆ- ಸೇರಿ 12,000 - ರೂ. ಮೌಲ್ಯದ ಬೆಳ್ಳಿ ಹಾಗೂ 1,700 ನಗದು ಹಣ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ರಜಾ ದಿನಗಳಲ್ಲಿ ಕಳ್ಳತನ

ಆರೋಪಿಗಳು ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಹಾಗೂ ಸಹಚರರೊಂದಿಗೆ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವುದರ ಬಗ್ಗೆ ತನಿಖೆ ವೇಳೆ ಮಾಹಿತಿ ಲಭಿಸಿದೆ. ರಮೇಶ್​ ವಿರುದ್ಧ ಈಗಾಗಲೇ ಬೇರೆ ರಾಜ್ಯದಲ್ಲಿ 11 ಕಳ್ಳತನ ಪ್ರಕರಣ ಮತ್ತು ಕಾಲಿಯಾ ಮೇಲೆ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿದೆ. ಆರೋಪಿಗಳು ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲೇ ಕಳ್ಳತನ ಮಾಡುವ ಚಾಳಿ ಉಳ್ಳವರಾಗಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net