ಗಮನ ಸೆಳೆಯುತ್ತಿದೆ ಗೃಹಶೋಭೆ, ಕೇಕ್ ಪ್ರದರ್ಶನ

lanchana - Copy
Published on

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಗೃಹಶೋಭೆ ಲಿವಿಂಗ್ ಸ್ಟೈಲ್ ವಸ್ತು ಪ್ರದರ್ಶನ ಮತ್ತು ಕೇಕ್ ಪ್ರದರ್ಶನ ಗಮನ ಸೆಳೆಯುತ್ತಿದೆ.
ಡಾಲ್ಫಿನ್ ಬೇಕರ್ಸ್‌ನಿಂದ ನಿರ್ಮಿಸಿರುವ ನೂತನ ಸಂಸತ್ ಭವನ ಮತ್ತು ರಾಷ್ಟ್ರೀಯ ಲಾಂಛನದ ಕೇಕ್ ಕಲಾಕೃತಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಕೆಕ್‌ಗಳನ್ನು ಥರ್ಮಾಕೋಲ್, ಫಾಂಡೆಂಟ್ ಐಸ್‌ಕ್ರೀಮ್ ಮತ್ತು ಆಹಾರ ಬಣ್ಣಗಳಿಂದ ಮಾಡಲಾಗಿದೆ. ಆರು ಕಾರ್ಮಿಕರ ಸಹಾಯದಿಂದ ಈ ಕಲಾಕೃತಿಯನ್ನು 35 ದಿನಗಳಲ್ಲಿ ತಯಾರಿಸಲಾಗಿದೆ. 12 ಅಡಿ ಉದ್ದ ಮತ್ತು 4 ಅಡಿ ಅಗಲವಿರುವ ಈ ಕಲಾಕೃತಿ ಅಂದಾಜು 560 ಕೆಜಿ ತೂಕವಿದೆ.


ಇದರ ಜತೆಗೆ 500 ಕೆಜಿ ತೂಕದ ರಾಷ್ಟ್ರೀಯ ಲಾಂಛನ ಕಲಾಕೃತಿಯನ್ನೂ ಮಾಡಲಾಗಿದ್ದು, 6 ಅಡಿ ಅಗಲ ಮತ್ತು 10 ಅಡಿ ಎತ್ತರವಿದೆ. ಇವುಗಳ ಜತೆಗೆ ಟೈಟಾನಿಕ್, ಸ್ಪೋರ್ಟ್ಸ್ ಕಾರ್, ಫಿಫಾ ವರ್ಲ್ಡ್‌ಕಪ್ ಮತ್ತು ಜರ್ಸಿ, ಜಂಗಲ್ ಥೀಮ್, ಟ್ರೀಹೌಸ್, ವೆಡ್ಡಿಂಗ್ ಸ್ಟೆಪ್ ಇನ್ನಿತರ ಕಲಾಕೃತಿಗಳ ಕೇಕ್‌ಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಈ ಬಾರಿ ‘ಗೃಹಶೋಭೆ’ ವಸ್ತು ಪ್ರದರ್ಶನ ಗ್ರಾಹಕರು ಮತ್ತು ಮಾರಾಟಗಾರರಿಗೆ ಸೂಕ್ತ ವೇದಿಕೆಯಾಗಿದೆ. ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು, ಉತ್ತಮ ಲಾಭ ಪಡೆಯಲು ಸಹಕಾರಿಯಾಗಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ಆಕರ್ಷಕ ವಿನ್ಯಾಸದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೋಮೊಬೈಲ್‌ಗಳು, ಪೇಂಟಿಂಗ್‌ಗಳು, ಕಾರ್ಪೆಟ್‌ಗಳು, ಮಾಡ್ಯುಲರ್ ಕಿಚನ್‌ಗಳಂತಹ ಬ್ರ್ಯಾಂಡೆಡ್ ಉತ್ಪನ್ನಗಳು ಗೃಹಶೋಭೆಯಲ್ಲಿ ಲಭ್ಯವಿರಲಿವೆ.
ದೊಡ್ಡ ರಿಯಾಯಿತಿ ಮತ್ತು ಆಶ್ಚರ್ಯಕರ ಉಡುಗೊರೆಗಳ ಜತೆಗೆ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯ ಇವೆ. ಮಕ್ಕಳನ್ನು ರಂಜಿಸುವ ಉದ್ದೇಶದಿಂದ ಸಾಕಷ್ಟು ಮನೋರಂಜನೆಗೆ ಆಟಿಕೆಗಳು ಸಹ ಇವೆ. ಸಣ್ಣ ಕಂಪನಿಗಳ ಉತ್ಪನ್ನಗಳಿಂದ ಆರಂಭವಾಗಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದು, ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9ರವರೆಗೆ ವಸ್ತು ಪ್ರದರ್ಶನ ವೀಕ್ಷಣೆಗೆ ಲಭ್ಯ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net