

ಹಾನಗಲ್ಲ: ಮನೆ ಮಾಲೀಕತ್ವ ಇಲ್ಲದೇ ಕಳೆದ 30-40 ವರ್ಷಗಳಿಂದ ಅನಿಶ್ಚಿತೆಯ ಬದುಕು ಸಾಗಿಸುತ್ತಿದ್ದ ತಾಲೂಕಿನ 13 ಸಾವಿರಕ್ಕೂ ಹೆಚ್ಚು ಕುಟುಂಬಗಳ ಪಾಲಿಗೆ ಈ ಸಲದ ದೀಪಾವಳಿ ಹೊಸ ಬೆಳಕು ನೀಡಿದೆ. ತಾಲೂಕಾಡಳಿತದ ಹಲವು ತಿಂಗಳುಗಳ ಶ್ರಮದಿಂದ ದಾಖಲೆರಹಿತ ಕುಟುಂಬಗಳಿಗೆ ಹಕ್ಕುಪತ್ರದೊಂದಿಗೆ ಶಾಶ್ವತವಾಗಿ ಮನೆ ಮಾಲೀಕತ್ವ ಲಭಿಸುತ್ತಿರುವುದೇ ಇದಕ್ಕೆ ಕಾರಣ.
ಖಾಸಗಿ ಮತ್ತು ಸರ್ಕಾರಿ ಸರ್ವೆ ನಂಬರ್ ಜಮೀನುಗಳಲ್ಲಿ ದಾಖಲೆ ರಹಿತವಾಗಿ ಹಲವು ದಶಕಗಳಿಂದ ವಾಸಿಸುತ್ತಿರುವ ಜನವಸತಿ ಪ್ರದೇಶಗಳನ್ನು ಕಂದಾಯ ಮತ್ತು ಉಪಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿರುವ ಕುಟುಂಬಗಳಿಗೆ ಮನೆಯ ದಾಖಲೆಗಳನ್ನು ನೀಡಿ, ಅಧಿಕೃತಗೊಳಿಸುವ ಕಾರ್ಯ ಶಾಸಕ ಶ್ರೀನಿವಾಸ ಮಾನೆ ಮಾರ್ಗದರ್ಶನ, ತಹಸೀಲ್ದಾರ್ ಎಸ್. ರೇಣುಕಾ ನೇತೃತ್ವದಲ್ಲಿ ಪೂರ್ಣಗೊಂಡಿದೆ. ಹಲವು ವರ್ಷಗಳ ಸಮಸ್ಯೆಗೀಗ ಪರಿಹಾರ ಸಿಕ್ಕಂತಾಗಿದೆ.
ಮನೆ ನಿರ್ವಿುಸಿಕೊಂಡು ದಾಖಲೆಗಳಿಲ್ಲದೆ, ಸೌಲಭ್ಯಗಳಿಂದ ವಂಚಿತವಾಗಿ ಬದುಕುತ್ತಿರುವ ತಾಂಡಾ, ಹಟ್ಟಿ, ಕಾಲನಿ, ಕ್ಯಾಂಪ್ ಇತರ ಜನವಸತಿ ಪ್ರದೇಶಗಳನ್ನು ದಾಖಲೆ ಸಹಿತ ಗಾಂವಠಾಣ ವ್ಯಾಪ್ತಿಗೆ ತಂದು ಹಕ್ಕುಪತ್ರ ವಿತರಣೆಗೆ ತಾಲೂಕಾಡಳಿತ ಮುಂದಾಗಿದೆ. ತಾಲೂಕಿನಲ್ಲಿ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವಲ್ಲಿ ಶಾಸಕ ಶ್ರೀನಿವಾಸ ಮಾನೆ ಗಮನ ಹರಿಸಿ ಹಕ್ಕುಪತ್ರ ವಿತರಣೆಗೆ ಮುಂದಾಗಿದ್ದರಿಂದ ಸಾವಿರಾರು ಕುಟುಂಬಗಳಲ್ಲಿ ಭರವಸೆಯ ಬೆಳಕು ಮೂಡಿದಂತಾಗಿದೆ.
2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಬದಲಾವಣೆ ತಂದು ಖಾಸಗಿ ಸರ್ವೆ ನಂಬರ್ನಲ್ಲಿ ಬೇರೆಯವರ ಮಾಲೀಕತ್ವದ ಜಮೀನಿನಲ್ಲಿ ವಾಸಿಸುತ್ತಿರುವ 10ಕ್ಕಿಂತ ಹೆಚ್ಚು ಕುಟುಂಬಗಳಿರುವ ಜನವಸತಿಯನ್ನು ಅಧಿಕೃತಗೊಳಿಸಿ ಹಕ್ಕುಪತ್ರ ನೀಡಲು ಅನುವು ಮಾಡಿಕೊಡಲಾಗಿದೆ. ತಾಲೂಕಿನಲ್ಲಿ 153 ಕಂದಾಯ ಮತ್ತು ಉಪ ಗ್ರಾಮಗಳನ್ನು ರಚಿಸಿ ಹಕ್ಕುಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ದೊರಕಿದೆ. ಮೊದಲ ಹಂತದಲ್ಲಿ ಕೆಲವರಕೊಪ್ಪ, ಉಪು್ಪಣಸಿ, ಹಳ್ಳಿಬೈಲ್, ಕಲಕೇರಿ, ಬಿಂಗಾಪುರ, ಲಕ್ಷ್ಮೀಪುರ, ಹುಲಗಿನಹಳ್ಳಿ, ಆಲದಕಟ್ಟಿ, ತಿಳವಳ್ಳಿ, ಕೊಂಡೋಜಿ, ಅಕ್ಕಿವಳ್ಳಿ, ಹರಳಕೊಪ್ಪ, ವಿಜಯನಗರ ಹೀಗೆ ಹಲವು ಗ್ರಾಮಗಳ ಒಂದು ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ.
ತಾಲೂಕಿನಲ್ಲಿ ದಾಖಲೆ ಇಲ್ಲದೇ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಮನೆ ಮಾಲೀಕತ್ವದ ಗ್ಯಾರಂಟಿ ಭರವಸೆ ನೀಡಲಾಗಿತ್ತು. ಹಕ್ಕುಪತ್ರ ನೀಡಲು 13,622 ಕುಟುಂಬಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. | ಶ್ರೀನಿವಾಸ ಮಾನೆ, ಶಾಸಕ ಅನಿಶ್ಚಿತತೆಯಲ್ಲಿದ್ದ ಸಾವಿರಾರು ಕುಟುಂಬಗಳಲ್ಲಿ ಸಂತಸ ಮೂಡಿದೆ. ಹಕ್ಕುಪತ್ರ ಮಾತ್ರವಲ್ಲ, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿ, ಇ-ಸ್ವತ್ತು ನೀಡುವ ಮೂಲಕ ಮನೆ ಮಾಲೀಕತ್ವ ನೀಡಲಾಗುತ್ತಿದೆ. | ಎಸ್. ರೇಣುಕಾ. ತಹಸೀಲ್ದಾರ್ ಹಾನಗಲ್ಲ