

ಬೆಳಗಾವಿ: ಬೀಗ ಹಾಕಿದ ಮನೆಗಳಿಗೆ ತಡರಾತ್ರಿ ಕನ್ನ ಹಾಕುತ್ತಿದ್ದ ಖದೀಮನನ್ನು ಕ್ಯಾಂಪ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದು, ಕಳ್ಳನಿಂದ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನಗರದ ವಂಟಮುರಿ ಕಾಲನಿ ನಿವಾಸಿ ರಾಜು ಯಲ್ಲಪ್ಪ ಆಲಟ್ಟಿ (19) ಬಂಧಿತ ಕಳ್ಳ. ಈ ಹಿಂದೆ ಕಳ್ಳತನ ನಡೆಸಿದ ಪ್ರಕರಣದಿಂದ ಬಾಲಾಪರಾಧಿಯಾಗಿದ್ದ ರಾಜು ಇತ್ತೀಚೆಗೆ ಬಿಡುಗಡೆಗೊಂಡಿದ್ದನು. 2019ರ ನವೆಂಬರ್, ಡಿಸೆಂಬರ್‌ನಲ್ಲಿ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆಗಳಲ್ಲಿ ಕ್ರಮವಾಗಿ 1,05,600 ಹಾಗೂ 1.53 ಲಕ್ಷ ಚಿನ್ನಾಭರಣ ಕದ್ದು ಪರಾರಿಯಾಗಿದ್ದನು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾಗ ಆರೋಪಿ ರಾಜುವನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ವಿನಾಯಕ ನಗರ ಹಾಗೂ ಹಿಂಡಲಗಾದ ವಿಜಯ ನಗರದಲ್ಲಿನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ, ಆತನಲ್ಲಿದ್ದ ಎಲ್ಲ ಚಿನ್ನಾಭರಣ ಸೇರಿ 4 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಡಿ. ಸಂತೋಷಕುಮಾರ, ಎಎಸ್‌ಐ ಬಿ.ಆರ್. ಡೂಗ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.