ಪ್ರಚೋದನಾಕಾರಿ ಭಾಷಣ ಕಾನೂನು ಕ್ರಮಕ್ಕೆ ಗೃಹಸಚಿವರ ಸೂಚನೆ

parameshwar
Published on

ಮಂಗಳೂರು: ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನಾಕಾರಿ ಭಾಷಣ, ಹೇಳಿಕೆಗಳು ಕಾರಣವಾಗುತ್ತಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಈ ಜಿಲ್ಲೆಗೆ ಬರುವಾಗ ಸಂತೋಷವಾಗುತ್ತಿತ್ತು. ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಇಲ್ಲಿ ನಡೆಯುವ ಘಟನಾವಳಿಗಳಿಂದ ಭಯದ ವಾತಾವರಣ ಇದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ಯಾವುದೇ ವ್ಯಕ್ತಿ, ಪಕ್ಷ ನೋಡದೆ ಕ್ರಮ ಜರುಗಿಸಬೇಕು ಎಂದರು.

ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳುವುದು ಪೊಲೀಸರ ಜವಾಬ್ದಾರಿ. ಯಾವುದೇ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಬೇಕು. ಜನರಿಗೆ ಶೀಘ್ರದಲ್ಲೇ ನ್ಯಾಯ ಕಲ್ಪಿಸಿ ಕೊಡಲು ಆದ್ಯತೆ ನೀಡಬೇಕು ಎಂದವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪಶ್ಚಿಮ ವಲಯ ಡಿಐಜಿಪಿ ಅಮಿತ್ ಸಿಂಗ್, ಹಿರಿಯ ಪೊಲೀಸ್ ಅಧಿಕಾರಿಗಳಾದ ರಿಷ್ಯಂತ್ ಸಿ.ಬಿ., ವಿಷ್ಣುವರ್ಧನ್, ಮಹಮ್ಮದ್ ಸಜಿತಾ, ಎನ್.ಯತೀಶ್ ಮೊದಲಾದವರಿದ್ದರು.

============================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net