

ಮಂಡ್ಯ: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾವಳಿ ತಡೆಗಟ್ಟುವ ಕುರಿತಂತೆ ಐಟಿಬಿಟಿ ಇಲಾಖೆ ಹಾಗೂ ವಿವಿಧ ಕಂಪನಿಗಳೊಂದಿಗೆ ಸಭೆ ನಡೆಸಿದ್ದೇನೆ. ಅಂತೆಯೇ ಹೊಸ ಕಾನೂನು ತರಲು ತೀರ್ಮಾನಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್‌ಲೈನ್ ಬೆಟ್ಟಿಂಗ್ ಹಾವಳಿ ಸಂಬಂಧ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಂತೆಯೇ ಆ ಸಮಿತಿಗೆ ಒಂದು ತಿಂಗಳು ಸಮಯ ನೀಡಲಾಗಿದೆ ಎಂದರು.
ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂಬುದು ಬಿಜೆಪಿ ಅವರಿಗೆ ಈಗ ಅರ್ಥವಾಗಿದೆ. ಅಂತೆಯೇ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರದ ಗಮನ ಸೆಳೆದಿದ್ದೇವೆ. ಜಿಎಸ್‌ಟಿ ಕಟ್ಟುವುದರಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದ್ದೇವೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ತೆರಿಗೆ ಕಟ್ಟುವುದರಿಂದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದು ಗೊತ್ತಾಗುತ್ತದ್ೆ ಎಂದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಜಿಎಸ್‌ಟಿ ಕಟ್ಟುವುದರಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಜ್ಯದ ಆರ್ಥಿಕ ಸ್ಥಿತಿ ಸಶಕ್ತವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದರು. ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದೇವೆ. ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಎಲ್ಲರಿಗೂ ಸಮಾನವಾಗಿ ಯೋಜನೆ ಕೊಟ್ಟಿದ್ದೇವೆ. ಹೆಣ್ಣು ಮಕ್ಕಳು ಆರ್ಥಿಕ ಶಕ್ತಿ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಯೋಜನೆ ನೀಡಿದ್ದೇವೆ. 10 ಕೆ.ಜಿ ಉಚಿತ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡಲಿಲ್ಲ. ಐದು ಕೆ.ಜಿ ಬದಲಿಗೆ ಹಣ ನೀಡಿದ್ದೇವೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣ ಉದ್ದೇಶದಿಂದ ಎರಡು ಸಾವಿರ ರೂ., 200 ಯುನಿಟ್ ಉಚಿತ ವಿದ್ಯುತ್, 10 ಕೆ.ಜಿ ಉಚಿತ ಅಕ್ಕಿ ಸಿಗುತ್ತಿದೆ. ಇಷ್ಟೆಲ್ಲ ಸವಲತ್ತುಗಳನ್ನು ನೀಡಿದರು ಜನ ಆಕ್ರೋಶಗೊಳ್ಳುತ್ತಾರೆಯೇ?. ಯಾವುದಾದರೂ ಅಭಿವೃದ್ಧಿ ಕಾರ್ಯಗಳು ನಿಂತಿವೆಯೇ?. ಇದು ಬಿಜೆಪಿಯವರ ಆಕ್ರೋಶ. ಬಿಜೆಪಿಯವರ ನಡವಳಿಕೆಯ ಬಗ್ಗೆ ರಾಜ್ಯದ ಜನ ಪ್ರತಿಕ್ರಿಯಿಸದೇ ಇದ್ದರೂ ಗಮನಿಸುತ್ತಿದ್ದಾರೆ. ಒಂದು ವೇಳೆ ಜನ ಆಕ್ರೋಶಗೊಂಡಿದ್ದರೆ ಉಪ ಚುನಾವಣೆಯಲ್ಲಿ ನಮ್ಮನ್ನು ತಿರಸ್ಕರಿಸಬಹುದಿತ್ತಲ್ಲವೇ?. ಮಾಜಿ ಮುಖ್ಯಮಂತ್ರಿಗಳ ಮಗನನ್ನೇ ಸೋಲಿಸಿದ್ದಾರೆ. ಮಾಜಿ ಸಿಎಂ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಜನರಿಗೆ ನಮ್ಮ ಅಳಿತದ ಬೇಸರವಿದ್ದರೆ ಉಪ ಚುನಾವಣೆಯಲ್ಲಿ ತಿರಸ್ಕರಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದರು ಎಂದು ಹೇಳಿದರು.
ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿರುವುದು ವಿಪರ್ಯಾಸ. ಬೆಲೆ ಏರಿಕೆ ಯಾವ ಕಾರಣಕ್ಕೆ ಆಗಿದೆ. ಕೇಂದ್ರ ಸರ್ಕಾರ ನಮ್ಮ ತೆರಿಗೆ ಪಾಲನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರದವರು ಏಕೆ ಅಡುಗೆ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದಾರೆ?. ಬೆಲೆ ಏರಿಸಿರುವುದು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ನಮಗೆ ಸರಿಯಾಗಿ ಅನುದಾನ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗಾಗಿ 5,300 ಕೋಟಿ ರೂ ವಿಶೇಷ ಅನುದಾನ ಕೊಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು. ಒಂದು ರೂಪಾಯಿ ಕೊಟ್ಟಿಲ್ಲ. ರಾಜ್ಯದಿಂದ 20 ಸಾವಿರ ಕೋಟಿ ರೂ ಜಿಎಸ್‌ಟಿ ಕಟ್ಟಿದರು, ಕೇವಲ 3 ಸಾವಿರ ಕೋಟಿ ರೂ ಕೊಟ್ಟಿದ್ದಾರೆ. ನಮಗೆ 12 ಸಾವಿರ ಕೋಟಿ ರೂ. ಕೊಡಬೇಕಿತ್ತು, ಕಳೆದ ವರ್ಷವೂ ಕೊಟ್ಟಿಲ್ಲ. ಈ ವರ್ಷವೂ ನೀಡಿಲ್ಲ ನಮ್ಮ ತೆರಿಗೆ ಪಾಲನ್ನು ನೀಡುವಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಇದನ್ನು ಕೇಂದ್ರ ಸರ್ಕಾರ ಪರಿಗಣಿಸಿಲ್ಲ ಎಂದು ಬೇಸರಿಸಿದರು.
ದಲಿತರ ಅನುದಾನ ದಲಿತರಿಗೆ ಬಳಸುತ್ತಿದ್ದೇವೆ. 51 ಸಾವಿರ ಕೋಟಿ ರೂ. ಗ್ಯಾರಂಟಿಗೆ ಖರ್ಚು ಮಾಡಿದ್ದೇವೆ. ಯಾವುದೇ ತೆರಿಗೆ ಇಲ್ಲದೇ ಖರ್ಚು ಮಾಡಲಾಗಿದೆ. ಕೇಂದ್ರದವರು ಜಿಎಸ್‌ಟಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಆಗುವುದಿಲ್ಲ. ರಾಜ್ಯದ ಜನರಿಗೆ ಮೋಸ ಮಾಡಲು ಆಗುವುದಿಲ್ಲ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆರಂಭವಾದ ಎರಡು ತಿಂಗಳಲ್ಲಿ 59 ಜನ ಸತ್ತಿದ್ದರು. ಇದಕ್ಕೆ ಕಾರಣ ಯಾರು?. ರಾಜ್ಯ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರಿಂದ ಅಪಘಾತಗಳು ನಿಂತಿವೆ ಎಂದು ತಿಳಿಸಿದರು.
ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್ ಇತರರಿದ್ದರು.