50 ಬಡ ಕುಟುಂಬಗಳಿಗೆ ಉಚಿತವಾಗಿ ಮನೆ ಹಸ್ತಾಂತರ: ಜೋಯಾಲುಕ್ಕಾಸ್​ನ ಸೇವೆ ಶ್ಲಾಘಿಸಿದ ಗೃಹ ಸಚಿವ

joya
Published on

ಬೆಂಗಳೂರು: ಜೋಯಾಲುಕ್ಕಾಸ್​ ಫೌಂಡೇಷನ್​, ನಿಮ್ಹಾನ್ಸ್​ ಕನ್ವೆನ್ಷನ್​ ಸೆಂಟರ್​ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೌಲಭ್ಯ ವಂಚಿತ ಬಡವರಿಗೆ ಉಚಿತವಾಗಿ 50 ಮನೆ ಹಸ್ತಾಂತರಿಸಲಾಯಿತು. ಕೇರಳ, ತಮಿಳುನಾಡು, ಕರ್ನಾಟಕದಲ್ಲಿರುವ ಅಂಗವಿಕಲರು, ದೀರ್ಘ ಕಾಲದ ಆರೋಗ್ಯದಿಂದ ಬಳಲುತ್ತಿರುವವರು,ಬುದ್ಧಿಮಾಂದ್ಯರು ಸೇರಿ ಬಡವರಿಗೆ "ಜಾಯ್​ ಹೋಮ್ಸ್​' ಯೋಜನೆಯಡಿ ಮನೆಯ ಕೀಲಿಕೈಯನ್ನು ಗೃಹ ಸಚಿವ ಜಿ. ಪರಮೇಶ್ವರ್​ ವಿತರಿಸಿದರು.

ರಾಷ್ಟ್ರದಲ್ಲಿ ಬಹಳಷ್ಟು ಬಡವರು, ವಸತಿ ರಹಿತರು ಇದ್ದಾರೆ. ಸರ್ಕಾರವು ಹಲವು ಕಾರ್ಯಕ್ರಮದಡಿ ಲಕ್ಷಾಂತರ ಮನೆ ನಿರ್ಮಿಸುತ್ತಿದೆ. ಆದರೂ, ಕುಟುಂಬದ ವಿಭಜನೆಯಿಂದ ವರ್ಷದಿಂದ ವರ್ಷಕ್ಕೆ ವಸತಿ ಇಲ್ಲದ ಸಂಖ್ಯೆಯೂ ಜಾಸ್ತಿಯಾಗುತ್ತದೆ. ಜೋಯಾಲುಕ್ಕಾಸ್​, ತನ್ನ ಆದಾಯದಲ್ಲಿ ಬಡವರಿಗೆ ಸಹಾಯ ಮಾಡಬೇಕೆಂಬ ಚಿಂತನೆ ಹೊಂದಿರುವುದು ಅಭಿನಂದನೀಯ. ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮಾಜಕ್ಕೆ ಇನ್ನಷ್ಟು ಸೇವೆ ಆ ಸಂಸ್ಥೆಯಿಂದ ಸಿಗುವಂತಾಗಲಿ ಎಂದು ಸಚಿವರು ಆಶಿಸಿದರು.

ಜೋಯಾಲುಕ್ಕಾಸ್​ ಸಿಇಒ ಬೇಬಿ ಜಾರ್ಜ್​, ಕಾರ್ಯನಿರ್ವಾಹಕ ನಿರ್ದೇಶಕ ಥಾಮಸ್​ ಮ್ಯಾಥ್ಯೂಸ್​, ಬೆಂಗಳೂರು ಆಭರಣಗಳ ಸಂದ ಚೇತನ್​ ಕುಮಾರ್​ ಮೆಹ್ತಾ ಮತ್ತಿತರರಿದ್ದರು.

414 ಮನೆ ಹಸ್ತಾಂತರ: 2009ರಲ್ಲಿ ಈ ಫೌಂಡೇಷನ್​ ಆರಂಭಿಸಲಾಯಿತು. "ಜಾಯ್​ ಹೋಮ್ಸ್​' ಯೋಜನೆಯಡಿ ಈವರೆಗೆ 414 ಮನೆಗಳಲ್ಲಿ ಹಸ್ತಾಂತರಿಸಲಾಗಿದೆ. 7.5 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ಈ ಮೂಲಕ ಬಡ ಕುಟುಂಬಗಳ ಜೀವನದಲ್ಲಿ ಸಂತಸ ತಂದಿದ್ದೇವೆ. ಬರುವ ದಿನಗಳಲ್ಲಿ ತೆಲಂಗಾಣದಲ್ಲಿ ಉಚಿತವಾಗಿ 50 ಮನೆಗಳ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಜೋಯಾಲುಕ್ಕಾಸ್​ ಸಿಎಂಡಿ ಜೋಯ್​ ಆಲುಕ್ಕಾಸ್​ ಹೇಳಿದರು. ಮಹಿಳಾ ಸಬಲೀಕರಣ, ಓಲ್ಡ್​ ಹೌಸ್​ ನಿರ್ಮಾಣ, ವಿದ್ಯಾರ್ಥಿವೇತನ, ಆರೋಗ್ಯ ಶಿಬಿರ, ಉಚಿತ ಡಯಾಲಿಸೀಸ್​, ಸಸಿ ನೆಡುವುದು ಸೇರಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾಳಿನ ಉತ್ತಮ ಭವಿಷ್ಯಕ್ಕಾಗಿ ಈ ಎಲ್ಲ ಕಾರ್ಯಕ್ರಮ ನಡೆಸಲಾಗುತ್ತದೆ.11 ದೇಶಗಳಲ್ಲಿ 173 ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದೆ. 2025ರಲ್ಲಿ 200 ಮಳಿಗೆಗಳ ಮುಟ್ಟಲು ಗುರಿ ಇಟ್ಟಿಕೊಂಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net