

ಹುಬ್ಬಳ್ಳಿ: ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಜಂಟಲ್‌ಮನ್ ಎಂದು ಭಾವಿಸಿದ್ದೆವು. ಅವರನ್ನೂ ಕತ್ತಲಿನಲ್ಲಿಟ್ಟು ಸರ್ಕಾರ ಎಲ್ಲ ರೀತಿಯ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಂಸ್ಕೃತಿ ಎನ್ನುವುದೇ ಇಲ್ಲ. ಅನಾಗರಿಕವಾಗಿ ವರ್ತಿಸುವವರು ಬಹಳಷ್ಟು ಜನರು ಇದ್ದಾರೆ. ಇದ್ದುದರಲ್ಲೇ ಕೆಲವರು ಸಂಯಮದಿಂದ ಇದ್ದಾರೆ. ನಾವು ಮರ್ಯಾದೆ ಮುಚ್ಚಿಕೊಂಡಿದ್ದೇವೆ. ಅವರ ತರಹ (ಕಾಂಗ್ರೆಸ್) ನಾವೇನು ಬಿಟ್ಟಿಲ್ಲ ಎಂದು ಚಾಟಿ ಬೀಸಿದರು.
ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ ಅವರು ಸಂಯಮದಿಂದ ಮಾತನಾಡುತ್ತಾರೆ ಎಂದುಕೊಂಡಿದ್ದೆ. ಅವರು ಸಹ ನಾನ್ಸೆನ್ಸ್ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ ನಾನ್ಸೆನ್ಸ್ ಆಗಿ ಮಾತನಾಡುತ್ತಿದೆ. ಎಂಎಲ್‌ಸಿ ಸಿ.ಟಿ. ರವಿ ಅವರ ಮೇಲಿನ ಆರೋಪವನ್ನು ಪೊಲೀಸರೇ ಅಪಘಾನಿಸ್ಥಾನದಲ್ಲಿ ಮಾಡಿದಂತೆ ಮಾಡುತ್ತಿದ್ದಾರೆ ಎಂದು ಜರಿದರು.
ಈಗಿರುವುದು ನಕಲಿ ಕಾಂಗ್ರೆಸ್, ನಕಲಿ ಗಾಂಧಿಗಳು. ಈಗಿನ ಕಾಂಗ್ರೆಸ್‌ಗೂ ಮಹಾತ್ಮಗಾಂಧಿಗೂ ಏನು ಸಂಬಂಧ? ಹಳೇ ಕಾಂಗ್ರೆಸ್ ತುಂಡಾಗಿ ಹಾಳಾಗಿದೆ. ಕಳ್ಳ ಕಾಕರ ಗುಂಪು, ನಕಲಿ ಗಾಂಧಿಗಳು, ನಕಲಿ ಕಾಂಗ್ರೆಸ್‌ಗೆ ಸರ್ಕಾರಿ ದುಡ್ಡು ಯಾಕೆ ಹಾಕ್ತೀರಾ? ಇವರು ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ವಾರಸುದಾರಲ್ಲ. ಜನ ಮೂರ್ಖರಲ್ಲ, ಜನತೆಗೆ ಎಲ್ಲವೂ ಗೊತ್ತಾಗುತ್ತಿದೆ ಎಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಸಮಾವೇಶ ಕುರಿತು ಹರಿಹಾಯ್ದರು.
ಬಹುಮಾನ: ತಮಗೆ ಓಟು ಹಾಕದ, ವಿರೋಧ ಇರುವವರು ಯಾರಾದರೂ ಪ್ರತಿಭಟನೆ ಮಾಡಿದರೆ ಕಾಂಗ್ರೆಸ್‌ನವರು ಲಾಠಿ ಚಾರ್ಜ್ ಮಾಡಿಸುತ್ತಾರೆ. ಲಾಠಿಯಿಂದ ಹೊಡೆದವರಿಗೆ ಬಹುಮಾನ ಕೊಡಿಸುತ್ತಾರೆ. ಸರ್ಕಾರದ ಈ ನಡೆ ಸರಿಯಿಲ್ಲ ಎಂದರು.