ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಯಿಂದ ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ : ಪ್ರೊ.ನರಸಿಂಹಪ್ಪ ಆತಂಕ

PROF NARASIMHAPPA
Published on

ದಾವಣಗೆರೆ: ದಕ್ಷಿಣ ಭಾರತದಲ್ಲಿ ಕಮಲ ಅರಳಿಸಬೇಕೆಂಬ ಸಂಕಲ್ಪ ತೊಟ್ಟಿರುವ ಆರ್‌ಎಸ್‌ಎಸ್ ಕನಸಿಗೆ ಅಹಿಂದ ವರ್ಗದ ಯುವಕರ ಹತ್ಯೆಗಳು ಕೊಳ್ಳಿ ಇಡುತ್ತಿವೆ ಎಂದು ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಅಮಾಯಕರು, ಹಿಂದುಳಿದವರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಅಮಾನವೀಯ ಘಟನೆಗಳನ್ನು ನಿಯಂತ್ರಿಸುವ ವಿಫಲರಾಗಿರುವ ಗೃಹಸಚಿವ ಆರಗ ಜ್ಞಾನೇಂದ್ರ ಬೇಜಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹಿಂದು ಕಾರ್ಯಕರ್ತರ, ಯುವಕರ ಹತ್ಯೆಯಾದಾಗ ಜನರ ಆಕ್ರೋಶ ಸಹಜ. ಆದರೆ, ಪಾತಕಿಗಳ ಬಂಧನದ ನಂತರ ಎಲ್ಲವೂ ತಣ್ಣಗಾಗಲಿದೆ. ಸರಿಹೋಗಲಿದೆ ಎಂಬ ಗೃಹ ಸಚಿವರ ಹೇಳಿಕೆ ಬೇಸರ ತರಿಸಿದೆ ಎಂದಿದ್ದಾರೆ.

ಮೈಸೂರಿನ ಅತ್ಯಾಚಾರದ ಘಟನೆ ಸಂದರ್ಭದಲ್ಲಿ ಘಟನೆಯನ್ನು ಖಂಡಿಸಿ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಗಟ್ಟಿಯಾಗಿ ಹೇಳುವ ಬದಲು ಸಂಜೆ ಸಮಯದಲ್ಲಿ ಹುಡುಗಿ ನಿರ್ಜನ ಪ್ರದೇಶಕ್ಕೆ ಏಕೆ ಹೋಗಿದ್ದಳು ಎಂದು ಪ್ರಶ್ನೆ ಮಾಡಿದ್ದು, ಯಾವ ಸಂದೇಶ ಕೊಡಲಿದೆ. ಗೃಹಮಂತ್ರಿ ಇಂತಹ ಹೇಳಿಕೆ ಕೊಡಬಹುಹುದೇ ಎಂದು ಪ್ರಶ್ನಿಸಿದ್ದಾರೆ.

ಹರ್ಷನನ್ನು ಕೊಂದ ಕೊಲೆ ಪಾತಕಿಗಳು ಜೈಲಿನಲ್ಲಿ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಹಿಂದುತ್ವ ಎಂದರೆ ಇದೇನಾ, ಕೊಲೆ ಪಾತಕಿಗಳಿಗೆ ತಕ್ಕಶಾಸ್ತಿ ಮಾಡುತ್ತೇವೆ ಎಂದು ಅಬ್ಬರಿಸುವ ನಾಯಕರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹರ್ಷನ ಸಹೋದರಿ ವ್ಯಕ್ತಪಡಿಸಿರುವ ಆಕ್ರೋಶ ಗೃಹ ಸಚಿವರಿಗೆ ಗೊತ್ತಿಲ್ಲವೇ ಎಂದಿದ್ದಾರೆ.

ರಾಜೀನಾಮೆ ಪರ್ವ ಪಕ್ಷದ ಪಾಲಿಗೆ ಮುಳ್ಳು

ಇಂತಹ ಹತ್ಯೆಗಳು ಬಸವರಾಜ ಬೊಮ್ಮಾಯಿ ಮತ್ತು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಒಂದಿಷ್ಟು ಒಳ್ಳೆಯ ಕೆಲಸ-ಕಾರ್ಯಗಳು ನೀರಿನಲ್ಲಿ ಹೋಮ ಮಾಡಿದಂತೆ ಆಗಲಿದೆ ಎಂದು ಪ್ರೊ.ನರಸಿಂಹಪ್ಪ ಎಚ್ಚರಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದು ಪಕ್ಷದ ಪಾಲಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಇದನ್ನು ಅರ್ಥ ಮಾಡಿಕೊಂಡು ತಕ್ಷಣವೇ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಧಕ್ಕೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net