ವಿಶೇಷ ಕಾರ್ಯ ಪಡೆ ಮೂರು ಜಿಲ್ಲೆಗೆ ಮಾತ್ರ...

Home Minister
Published on

ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟನೆ

ಮಂಗಳೂರು, ಉಡುಪಿ, ಶಿವಮೊಗ್ಗದಲ್ಲಿ ಕಾರ್ಯಾಚರಣೆ ಆರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೋಮು ಸಂರ್ಷ ನಿಗ್ರಹಕ್ಕಾಗಿ ರಾಜ್ಯದ ಮಂಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಪೊಲೀಸ್​ ಇಲಾಖೆಯಿಂದ ವಿಶೇಷ ಕಾರ್ಯ ಪಡೆ (ಎಸ್​ಟಿಎಫ್​) ಆರಂಭಿಸಲಾಗಿದೆ. ನಿನ್ನೆ ಜೂ.13ರಿಂದಲೇ ಈ ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಆರಂಭವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಮಾಹಿತಿ ನೀಡಿದರು.

ಉಡುಪಿಯಲ್ಲಿ ಜೂನ್​ 14ರಂದು ಮಾಧ್ಯಮದವರೊಂದಿಗೆ ಮಾತನಾಡಿ, ಮಂಗಳೂರು ಭಾಗವನ್ನು ಕಮಿಷನರ್​ ನೋಡಿಕೊಳ್ಳುತ್ತಾರೆ. ಐಜಿಯವರು ಮೂರು ಜಿಲ್ಲೆಗಳನ್ನು ನೋಡಿಕೊಳ್ಳುತ್ತಾರೆ. ಯಾವ ರೀತಿ ಕೆಲಸ ಮಾಡಬೇಕೆನ್ನುವುದನ್ನು ಎಸ್​ಒಪಿ ಪ್ರಕಾರ ಅವರು ನಿರ್ವಹಿಸುತ್ತಾರೆ. ಇದು ಮೂರು ಜಿಲ್ಲೆಗಳಿಗೆ ಮಾತ್ರ. ರಾಜ್ಯದ ಬೇರೆ ಜಿಲ್ಲೆಗಳಿಗೆ ಈ ಪಡೆಯ ಅವಶ್ಯಕತೆಯಿಲ್ಲ. ಅಗತ್ಯತೆ ಇದ್ದಲ್ಲಿ ಮಾತ್ರ ಆ ಜಿಲ್ಲೆಗೆ ವಿಸ್ತರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಯಶ್​ಪಾಲ್​ ಹೇಳಿಕೆ ಅಪ್ರಸ್ತುತ

ಉಡುಪಿ ಜಿಲ್ಲೆಯನ್ನು ಕೋಮು ಪೀಡಿತ ಎಂದು ಬಿಂಬಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಹೇಳಿಕೆ ಅಪ್ರಸ್ತುತ. ಸರ್ಕಾರ ಖಂಡಿತ ಆ ಪ್ರಯತ್ನ ಮಾಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಥವಾ ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಘಟನಾವಳಿಗಳ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಯಾವುದೇ ಜಿಲ್ಲೆಯನ್ನು ಕೋಮು ಪೀಡಿತ ಎಂದು ಬಿಂಬಿಸಲು ವಿಶೇಷ ಕಾರ್ಯ ಪಡೆ ರಚಿಸಿಲ್ಲ. ಅದರ ಅಗತ್ಯತೆಯೂ ಬರಬಾರದೆಂದೂ ನಾನು ಮಂಗಳೂರಿನಲ್ಲಿ ಈ ಪಡೆಗೆ ಚಾಲನೆ ನೀಡುವಾಗ ತಿಳಿಸಿದ್ದೇನೆ ಎಂದರು.

ಜನರೇ ತೀರ್ಮಾನಿಸಲಿ

ನಾನು ಜನ ಸಮುದಾಯಕ್ಕೂ ಸಹ ಈ ವಿಶೇಷ ಕಾರ್ಯ ಪಡೆ ಉಪಯೋಗ ಆಗದ ರೀತಿಯಲ್ಲಿ ನಡೆದುಕೊಳ್ಳಿ ಎಂದು ವಿನಂತಿಸಿದ್ದೇನೆ. ಅಂದರೆ, ಕೋಮುವಾದಕ್ಕೆ ಸಂಬಂಧಪಟ್ಟ ಯಾವುದೇ ಘಟನೆ ಮಾಡದಿದ್ದರೆ ಈ ವಿಶೇಷ ಪಡೆಯ ಅಗತ್ಯತೆಯೇ ಬರುವುದಿಲ್ಲ. ಅದು ಬೇಕೋ, ಬೇಡವೋ ಎನ್ನುವುದನ್ನು ಜನರೇ ತೀರ್ಮಾನಿಸಬೇಕು. ಅಗತ್ಯತೆ ಬರಲಿಲ್ಲ ಎಂದಾದರೆ ಕೋಮುವಾದ ಸಂಪೂರ್ಣ ಕಡಿಮೆ ಆಗಿದೆ ಎಂದರ್ಥವಲ್ಲವೇ ಎಂದು ಪ್ರಶ್ನಿಸಿದರು.

ಎಎನ್ಎಫ್ ನಿಂದ ತೊಂದರೆಯಾಗಿದೆಯೇ?

ಕಾರ್ಕಳ-ಹೆಬ್ರಿ ಭಾಗದಲ್ಲಿ ನಕ್ಸಲ್​ ಚಟುವಟಿಕೆ ಹೆಚ್ಚಿರುವುದರಿಂದ ಕಾರ್ಕಳದಲ್ಲಿಯೇ ನಕ್ಸಲ್​ ನಿಗ್ರಹ ದಳ (ಎಎನ್ಎಫ್​)ದ ಮುಖ್ಯ ಕಚೇರಿ ತೆರೆದಿದ್ದೇವೆ. ಅದರಿಂದ ಉಡುಪಿ ಜಿಲ್ಲೆಯ ಜನತೆಗೆ ತೊಂದರೆ ಆಗಿದೆಯೇ? ಅಥವಾ ಉಡುಪಿಯ ಘನತೆ ಕಡಿಮೆ ಆಗಿದೆಯೇ? ನಕ್ಸಲರು ಎಷ್ಟು ಜನರನ್ನು ಹತ್ಯೆ ಮಾಡಿದ್ದರು, ಎಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನುವುದು ಜನರಿಗೆ ಗೊತ್ತಿದೆ ಅಲ್ಲವೇ? ಸಮಾಜ ರಕ್ಷಣೆಗೆ ಪೊಲೀಸ್​ ವ್ಯವಸ್ಥೆ ಇದೆ. ಅವರಿದ್ದರೆ ಜನರ ಘನತೆಗೆ ಧಕ್ಕೆ ಆಗುತ್ತದಯೇ? ಕಾನೂನು ಸುವ್ಯವಸ್ಥೆಗೊಳಿಸಲು ಪೊಲೀಸ್​ ಇಲಾಖೆ ಇದೆ. ಅದರಂತೆ ಇದೂ ಸಹ ಕೋಮ ಚಟುವಟಿಕೆ ನಿಗ್ರಹಿಸಲು ಮಾಡಿರುವ ವಿಶೇಷ ಕಾರ್ಯ ಪಡೆಯಾಗಿದೆ ಎಂದರು.

ತಪ್ಪಿದವರ ಜನ ಗಣತಿ ಮಾತ್ರ ಮುಂದುವರಿಕೆ

ಜಾತಿ ಗಣತಿ ವಿಚಾರವಾಗಿ ಅನ್ಯರ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಗಣತಿ ಮುಂದುವರಿಕೆಗೆ ಈಗಾಗಲೇ ಸಿಎಂ ಮತ್ತು ಸಂಪುಟ ತೀರ್ಮಾನ ಮಾಡಿದೆ. ಈಗ ಮಾಡಿರುವ ಜಾತಿ ಜನ ಗಣತಿಯ ಸಮೀಕ್ಷೆಯಲ್ಲಿ ಅಂಕಿ-ಅಂಶ ಸರಿಯಾಗಿಲ್ಲವೆಂದು ಸಮುದಾಯ, ಸಂಘ-ಸಂಸ್ಥೆಗಳಿಂದ ಮತ್ತು ಅನೇಕ ಜನಾಭಿಪ್ರಾಯ ಬಂದಿದೆ. ಜನಸಂಖ್ಯೆ ಹೆಚ್ಚಿದೆ ಅಥವಾ ಕಡಿಮೆ ಇದೆ ಎಂದು ಅವರುಗಳು ತಿಳಿಸಿದ್ದಾರೆ. ಅಲ್ಲದೆ, ಈಗಿರುವ ಅಂಕಿ-ಅಂಶ 10 ವರ್ಷ ಹಳೆಯದು. ಈಗ ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆ ಹೆಚ್ಚಾಗಿದೆ. ಅವರನ್ನೂ ಸಹ ಗಣನೆಗೆ ತೆಗೆದುಕೊಂಡು ಗಣತಿ ಮಾಡಬೇಕೆಂಬ ಒತ್ತಾಯ ಬಂದಿದೆ. ಜನಾಭಿಪ್ರಾಯದ ಈ ಹಿನ್ನೆಲೆಯಲ್ಲಿಯೇ ನಮ್ಮ ಹೈಕಮಾಂಡ್​ ಸಹ ಇದೇ ಅಭಿಪ್ರಾಯ ನೀಡಿದೆ. ಕಾಂತರಾಜ್​ ಹಾಗೂ ಜಯಪ್ರಕಾಶ್​ ಹೆಗ್ಡೆ ಆಯೋಗವು ವೈಜ್ಞಾನಿಕವಾಗಿಯೇ ಅಡಿಪಾಯ ಹಾಕಿ ಸಮೀಕ್ಷೆ ಮಾಡಿದೆ. ಅವರ ವರದಿ ಮೂಲೆಗುಂಪಾಗದು. ಅವರ ವರದಿ ಆಧಾರದಲ್ಲಿಯೇ ಗಣತಿ ಮಾತ್ರ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರವೂ ಸಹ ಜನಗಣತಿ ಮಾಡುವುದಾಗಿ ಹೇಳಿದೆ. ಮತ್ತೆ ರಾಜ್ಯ ಸರ್ಕಾರ ಗಣತಿ ಮಾಡುವುದು ಏಕೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಅಥವಾ ಶೈಕ್ಷಣಿಕವಾಗಿ ಗಣತಿ ಮಾಡುತ್ತಿಲ್ಲ. ಅವರು ಕೇವಲ ಸೆನ್ಸಸ್​ ಮಾತ್ರ ಮಾಡುತ್ತಿದ್ದಾರೆ ಎಂದು ಸಚಿವ ಪರಮೇಶ್ವರ ತಿಳಿಸಿದರು.

ಕೊಲ್ಲೂರು ಭೇಟಿ ನನ್ನ ವೈಯಕ್ತಿಕ ವಿಚಾರ

ಶನಿವಾರ ಬೆಳಗ್ಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದೇನೆ. ಇದು ನನ್ನ ವೈಯಕ್ತಿಕ ವಿಚಾರ. ಸರ್ಕಾರಿ ಕಾರ್ಯದ ಭೇಟಿಯಲ್ಲ. ಆ ಬಗ್ಗೆ ಹೆಚ್ಚಿನ ಮಾತನಾಡುವುದಿಲ್ಲ. ದೇವಸ್ಥಾನಕ್ಕೆ ಹೋಗುವುದು ನಮ್ಮ ಸಂಪ್ರದಾಯ. ಹೀಗಾಗಿ ಮೂಕಾಂಬಿಕಾ ದೇವಿಗೆ ನಮಸ್ಕರಿಸಿ ಬಂದಿದ್ದೇನೆ. ಯಾಕೆ, ಏನು ಎನ್ನುವುದನ್ನು ನೀವೂ ಕೇಳಬಾರದು, ಅದನ್ನು ನಾನೂ ಹೇಳಬಾರದು ಎಂದು ತಿಳಿಸಿದ ಸಚಿವ ಪರಮೇಶ್ವರ, ಮುಗುಳ್ನಕ್ಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net