ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಸಮರ್ಥನೆ, ದಲಿತ ಸಮುದಾಯಕ್ಕೆ ಸಂಸದ ಜಿಗಜಿಣಗಿ ಕಿವಿಮಾತು, ಕಾಂಗ್ರೆಸ್‌ನ ಮೊಸಳೆ ಕಣ್ಣೀರಿಗೆ ಮೋಸ ಹೋಗದಿರಿ

RAMES JIGAJINAGI PRESS MEET AMBEDKAR ISSUE
ವಿಜಯಪುರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಆರ್.ಎಸ್. ಪಾಟೀಲ ಕುಚಬಾಳ, ರಮೇಶ ಭೂಸನೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರದಲ್ಲಿ ಕಾಂಗ್ರೆಸ್ ಸುರಿಸುವ ಮೊಸಳೆ ಕಣ್ಣೀರಿಗೆ ದಲಿತರು ಮೋಸಹೋಗಬಾರದು ಎಂದು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿದರು.

ಸ್ವಾತಂತ್ರೃ ಬಂದಾಗಿನಿಂದ ಈವರೆಗೂ ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಮೋಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ದಲಿತರ ಹೆಸರಿನಲ್ಲಿ ರಾಜಕಾರಣ ಮಾಡಿರುವ ಕಾಂಗ್ರೆಸ್ ದಲಿತರಿಗೆ ಕೊಟ್ಟ ಕೊಡುಗೆ ಏನು? ಡಾ.ಅಂಬೇಡ್ಕರ್ ಅವರನ್ನು ಬದುಕಿದ್ದಾಗಲೇ ಅವಮಾನಿಸಿ, ರಾಜಕೀಯವಾಗಿ ಸೋಲಿಸಿದ್ದ ಕಾಂಗ್ರೆಸ್ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಿ ನಾಟಕ ಆರಂಭಿಸಿದ್ದು, ಇದಕ್ಕೆ ದಲಿತರು ಕಿವಿಗೊಡಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಮಾಡಿರುವ ಅವಮಾನ ಎಂದಿಗೂ ಮರೆಯಲಸಾಧ್ಯ. ಬಾಬಸಾಹೇಬರು ತೀರಿಕೊಂಡಾಗ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ಕೊಡದೇ ಅವಮಾನಿಸಿದ್ದು ಕಾಂಗ್ರೆಸ್. ಅಷ್ಟೇ ಏಕೆ ಅವರ ಪಾರ್ಥೀವ ಶರೀರ ರವಾನಿಸಲೂ ಸಹಾಯ ಮಾಡದ ಕಾರಣ ಬಾಬಾಸಾಹೇಬರ ಸ್ವಂತ ಕಾರು ಮಾರುವ ಸ್ಥಿತಿ ನಿರ್ಮಾಣ ಮಾಡಿದ್ದು ಕಾಂಗ್ರೆಸ್. ಬದುಕಿದ್ದಾಗಲೇ ಇಂದಿರಾಗಾಂಧಿ, ರಾಜೀವ ಗಾಂಧಿ ಭಾರತ ರತ್ನ ಪಡೆದರು. ಆದರೆ, ಬಾಬಾಸಾಹೇಬರಿಗೆ ಭಾರತ ರತ್ನ ನೀಡಿರಲಿಲ್ಲ. ಬಳಿಕ ಬಿಜೆಪಿ ಬೆಂಬಲಿತ ಪಕ್ಷ ಅಧಿಕಾರದಲ್ಲಿದ್ದಾಗ ಭಾರತ ರತ್ನ ನೀಡಲಾಯಿತು. ಹೀಗೆ ಅನೇಕ ರೀತಿ ಅವಮಾನ ಮಾಡಿರುವ ಕಾಂಗ್ರೆಸ್ ಇದೀಗ ಮತ್ತೆ ಮೊಸಳೆ ಕಣ್ಣೀರು ಸುರಿಸಲಾರಂಭಿಸಿದೆ ಎಂದರು.

ಕಾಶ್ಮೀರದಲ್ಲಿ ಆರ್ಟಿಕಲ್ 370 ಜಾರಿಗೆ ತರುವ ಮೂಲಕ ದಲಿತರ ಮೀಸಲಾತಿ ಕಸಿದುಕೊಳ್ಳಲಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಮಿತ್ ಷಾ ಅವರು ಆರ್ಟಿಕಲ್ 370 ರದ್ದು ಪಡಿಸಿ ದಲಿತರಿಗೆ ಮೀಸಲಾತಿ ಕಲ್ಪಿಸಿದರು. ಸಂಸತ್‌ನಲ್ಲಿ ಅಮಿತ್ ಷಾ ಏನು ಮಾತನಾಡಿದ್ದಾರೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವರ ಮಾತಿನ ತಾತ್ಪರ್ಯ ಅರಿಯದೇ ಏನೇನೋ ಮಾತನಾಡುವುದು ಸರಿಯಲ್ಲ. ಅಮಿತ್ ಷಾ ಅವರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಬಗ್ಗೆ ನಿರಂತರವಾಗಿ ಅವಮಾನ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಇದೀಗ ಅದೇ ಬಾಬಾಸಾಹೇಬರ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ಗೆ ಅಂಬೇಡ್ಕರ್ ಅವರ ಹೆಸರು ಹೇಳಿಕೊಳ್ಳುವ ಯೋಗ್ಯತೆ ಇಲ್ಲ. ಏಕೆಂದರೆ ಬಾಬಾಸಾಹೇಬರ ಜೀವಿತಾವಧಿಯಲ್ಲಿಯೇ ಕಾಂಗ್ರೆಸ್ ಬಹಳ ಕೆಟ್ಟದಾಗಿ ನಡೆದುಕೊಂಡಿದೆ. ಬಾಬಾಸಾಹೇಬರು ಕರಡು ಸಮಿತಿಗೆ ನೇಮಕವಾಗುವಾಗ ಬಾಂಬೆ ಪ್ರಾಂತ್ಯದಿಂದ ಚುನಾಯಿತರಾಗಬೇಕಾಯಿತು. ಪ್ರಾರಂಭದಲ್ಲಿ ಅವರು ಅಧ್ಯಕ್ಷರಾಗದೆ ಕೇವಲ ಸದಸ್ಯರಾಗಿದ್ದರು. ಬಳಿಕ ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗಲೂ ನೇಹರು ಪ್ರಚಾರಕ್ಕೆ ಹೋಗಿ ಅವರನ್ನು ಸೋಲಿಸಿದ್ದರು. ಹಿಂದು ಕೋಡ್ ಬಿಲ್ ಮಂಡನೆ ಮಾಡಿದಾಗ ಕಾಂಗ್ರೆಸ್ ವಿರೋಧಿಸಿತು. ಹೀಗಾಗಿ ಅಂಬೇಡ್ಕರ್ ಅವರು ರಾಜೀನಾಮೆ ಕೊಡುವಾಗಲೂ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿಲ್ಲ. ದಲಿತರ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನೆಹರು ಕೂಡ ವಿಷಾದ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ದಲಿತ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ನಿಲುವು ತಾಳಿರುವ ಕಾಂಗ್ರೆಸ್ ಇದೀಗ ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಿ ನಾಟಕ ಮಾಡುತ್ತಿರುವುದು ಜನರಿಗೆ ತಿಳಿಯದ ವಿಷಯವೇನಲ್ಲ ಎಂದರು.

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಐದು ಪ್ರಮುಖ ಸ್ಥಳಗಳನ್ನು ಅಭಿವೃದ್ಧಿ ಪಡಿಸಿರುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಆದರೆ, ಕಾಂಗ್ರೆಸ್ ದಲಿತರಿಗಾಗಿ ನೀಡಿದ ಕೊಡುಗೆ ಏನು? ನಮ್ಮದೇ ರಾಜ್ಯದಲ್ಲಿ ದಲಿತ ಸಮುದಾಯದ ಎಸ್‌ಸಿಪಿ=ಟಿಎಸ್‌ಪಿಯ 25 ಸಾವಿರ ಕೋಟಿ ರೂಪಾಯಿ ಹಣ ಕೂಡ ದುರುಪಯೋಗ ಪಡಿಸಿಕೊಂಡಿತು. ಹೀಗಾಗಿ ಕಾಂಗ್ರೆಸ್ ಎಂದರೆ ಸುಡುವ ಮನೆ ಎಂದು ಅಂಬೇಡ್ಕರ್ ಅವರೇ ಹೇಳಿ ಹೋಗಿದ್ದಾರೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ವಿವೇಕಾನಂದ ಡಬ್ಬಿ, ಸಂಜೀವ ಐಹೊಳೆ, ಈರಣ್ಣ ರಾವೂರ, ಮಳುಗೌಡ ಪಾಟೀಲ, ವಿಜಯಕುಮಾರ ಜೋಷಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net