ಆರ್ಥಿಕ ದಿವಾಳಿತನ ಒಪ್ಪಿಕೊಂಡ ಗೃಹಸಚಿವ

Mahesh Tenginakayi
Published on

ಹುಬ್ಬಳ್ಳಿ : ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ರಾಜ್ಯ ಸರ್ಕಾರದ ಬಳಿ ಹಣವಿಲ್ಲವೆಂದು ಒಪ್ಪಿಕೊಳ್ಳುವ ಮೂಲಕ ಸರ್ಕಾರ ಆರ್ಥಿಕ ದಿವಾಳಿಗೆ ಈಡಾಗಿದೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಬೇಕೆಂಬ ಪರಮೇಶ್ವರ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಜ್ಯಕ್ಕೆ ನೀಡಬೇಕಿರುವ ಅನುದಾನವನ್ನು ಕೇಂದ್ರ ನೀಡುತ್ತ ಬಂದಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರದ ಬೊಕ್ಕಸ ಖಾಲಿ ಆಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢಿಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಹರಿಸುತ್ತಿಲ್ಲ. ಈ ಮೊದಲು ಬಿಜೆಪಿ ಶಾಸಕರಷ್ಟೇ ಸರ್ಕಾರದ ಬಳಿ ಹಣವಿಲ್ಲವೆಂದು ದೂರುತ್ತಿದ್ದರು. ಇದೀಗ ಕಾಂಗ್ರೆಸ್​ನ ಶಾಸಕರು, ಸಚಿವರೇ ಸರ್ಕಾರದ ಬಳಿ ಹಣವಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆಯೆಂದು ಬಹಿರಂಗವಾಗಿ ದೂರುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಬೇಜವಾಬ್ದಾರಿ ಆಡಳಿತದಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕಾಂಗ್ರೆಸ್​ನ ಹಿರಿಯ ಶಾಸಕ ಬಿ.ಆರ್. ಪಾಟೀಲ ಅವರೇ ಆರೋಪ ಮಾಡಿದ್ದಾರೆ. ಹೀಗಾಗಿ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕೂಡಲೇ ಸಚಿವ ಸಂಪುಟದಿಅದ ಕೈಬಿಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವರ ಮೇಲೆಯೇ ಕಾಂಗ್ರೆಸ್ ಶಾಸಕರು ಆರೋಪ ಮಾಡುತ್ತಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಬ್ರಷ್ಟಾಚಾರ ಯುಕ್ತ ರಾಜ್ಯ ಎಂದರೆ ಅದು ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ಎಂಬುದು ಜಗಜ್ಜಾಹೀರಾಗಿದೆ. ಇನ್ನಾದರು ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟರನ್ನು ಸಂಪುಟದಿಂದ ಕೈಬಿಡಬೇಕು. ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಾತಿ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು. ರಾಷ್ಟ್ರೀಯ ನಾಯಕರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net