

ಬೆಳಗಾವಿ: ಒಂದೆಡೆ ಕರೊನಾ ಎಫೆಕ್ಟ್‌ನಿಂದ ಚಿಲ್ಲರೆ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಇತ್ತ ಮಾರುಕಟ್ಟೆಗಳಲ್ಲಿ ಮಾರಾಟವಾಗದೆ ಉಳಿದಿರುವ ನೂರಾರು ಕೆಜಿ ತರಕಾರಿಯನ್ನು ಮನೆ ಬಾಗಿಲಿಗೇ ತೆರಳಿ ಉಚಿತವಾಗಿ ನೀಡುವ ಕಾರ್ಯಕ್ಕೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂದಾಗಿದೆ.
ಕರೊನಾ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಸಗಟು ಮಾರುಕಟ್ಟೆಯಲ್ಲಿಯೂ ತರಕಾರಿ ಮಾರಾಟವಾಗುತ್ತಿಲ್ಲವೆಂದು ನೊಂದ ರೈತರು ನೂರಾರು ಕೆಜಿ ತರಕಾರಿಯನ್ನು ಎಪಿಎಂಸಿ ಆವರಣದಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.
ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನೂರಾರು ಕ್ವಿಂಟಾಲ್ ಬದನೆ, ಹಿರೇಕಾಯಿ, ಬೀನ್ಸ್, ಮೆಣಸಿನಕಾಯಿ, ಕುಂಬಳಕಾಯಿ, ಕ್ಯಾರೆಟ್, ಕೊತ್ತಂಬರಿ, ಹಾಗಲಕಾಯಿ ಸೇರಿ ಮತ್ತಿತರ ತರಕಾರಿ ಬರುತ್ತಿದೆ. ಆದರೆ, ಕರೊನಾ ಪ್ರಭಾವದಿಂದಾಗಿ ನಿರೀಕ್ಷಿತ
ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ. ಹೀಗಾಗಿ ಕೆಲ ರೈತರು ಬಾಕಿ ಉಳಿದ ತರಕಾರಿಯನ್ನು ಎಪಿಎಂಸಿ ಆವರಣದಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಅಲ್ಲಿಯೇ ಕೊಳೆತು ಹೋಗಲಿದ್ದ ಆ ತರಕಾರಿಯನ್ನು ಸದ್ಯ ಎಪಿಎಂಸಿ ಅಧಿಕಾರಿಗಳು ಹಸಿದ ಹೊಟ್ಟೆಗಳಿಗೆ ಉಚಿತವಾಗಿ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಮಿಕರಿಗೆ ವಿತರಣೆ: ಸೋಮವಾರ ಎಪಿಎಂಸಿಯಲ್ಲಿ ಉಳಿದ ತರಕಾರಿಯನ್ನು 26 ವಾಹನಗಳ ಮೂಲಕ ತೆಗೆದುಕೊಂಡು ಹೋದ ಅಧಿಕಾರಿಗಳು, ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ನೀಡಿದ್ದಾರೆ. ಪೌರ ಕಾರ್ಮಿಕರು ಸೇರಿ ಬಡ ಕುಟುಂಬಗಳ ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಚಿತವಾಗಿ ತರಕಾರಿ ನೀಡಿರುವುದು ವಿಶೇಷವಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಾರರು ಮತ್ತು ಸಣ್ಣ ರೈತರು ಬೆಳೆದ ತರಕಾರಿ ಮಾರಾಟವಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಪಿಎಂಸಿಗೆ ಬೆಳೆ ತಲುಪಿಸಲು ರೈತರು ಪರದಾಡುತ್ತಿದ್ದಾರೆ. ಸರ್ಕಾರ ಶೀಘ್ರ ರೈತರ ನೆರವಿಗೆ ಮುಂದಾಗಬೇಕು. |ಅಪ್ಪಾಸಾಹೇಬ ದೇಸಾಯಿ ರೈತ ಸಂಘಟನೆ ಬೆಳಗಾವಿ ತಾಲೂಕಾಧ್ಯಕ್ಷ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ