ಗೃಹವಾಸಕ್ಕೆ ಸೋಂಕಿತರು ಜೈ

Corona
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ಕರಾವಳಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮೇಲೆ ಒತ್ತಡ ಕಡಿಮೆಯಾಗಿದೆ. ಬಹುತೇಕ ಮಂದಿಯನ್ನು ಆಸ್ಪತ್ರೆ ಬದಲು ಮನೆಯಲ್ಲೇ ಚಿಕಿತ್ಸೆ (ಹೋ ಐಸೋಲೇಶನ್)ಪಡೆಯಲು ಅನುವು ಮಾಡಿಕೊಡಲಾಗುತ್ತಿರುವುದು ಇದಕ್ಕೆ ಕಾರಣ.

ಸದ್ಯ ವರದಿಯಾಗುತ್ತಿರುವ ಬಹುತೇಕ ಮಂದಿಯಲ್ಲಿ ರೋಗ ಲಕ್ಷಣಗಳು ಇಲ್ಲ. ಒಂದೊಮ್ಮೆ ಇದ್ದರೂ ಸ್ಥಿತಿ ಗಂಭೀರವಾಗಿ ಇರುವುದಿಲ್ಲ. ಅಂಥವರು 10 ದಿನ ಮನೆಯಲ್ಲೇ ಇದ್ದು ರೋಗಮುಕ್ತರಾಗಿ, ಮತ್ತೆ 7 ದಿನಗಳ ಐಸೋಲೇಶನ್ ಮುಗಿಸುತ್ತಿದ್ದಾರೆ. ಹಾಗಾಗಿ ದೊಡ್ಡ ಸಂಖ್ಯೆಯ ಕೋವಿಡ್ ಪಾಸಿಟಿವ್ ಮಂದಿ ಸದ್ಯ ಮನೆಗಳಲ್ಲಿದ್ದಾರೆ. ಪ್ರಾರಂಭದ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ಸೇರಿಸುವುದೇ ಸಾಹಸವಾಗಿತ್ತು. ಇದು ದೊಡ್ಡ ಒತ್ತಡ ಸೃಷ್ಟಿಸುವ ಸಾಧ್ಯತೆಯೂ ಗೋಚರಿಸಿತ್ತು. ಆದರೆ, ಸರ್ಕಾರ ಈಗ ಕೋವಿಡ್ ರೋಗಿಗಳಿಗೆ ಸೂಕ್ತ ಷರತ್ತುಗಳೊಂದಿಗೆ ಗೃಹವಾಸಕ್ಕೆ ಅವಕಾಶ ನೀಡುರುವುದರಿಂದ ಆರೋಗ್ಯ ಇಲಾಖೆ ನಿಟ್ಟುಸಿರುಬಿಟ್ಟಿದೆ.

ಈ ಬಗ್ಗೆ 'ವಿಜಯವಾಣಿ'ಗೆ ಮಾಹಿತಿ ನೀಡಿದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಹಿಂದೆ ನಮ್ಮಲ್ಲಿ ಆಸ್ಪತ್ರೆಗೆ ಹೆಚ್ಚು ಪ್ರಕರಣಗಳು ಬರುತ್ತಿದ್ದವು. ಈಗ ಶೇ.60ರಷ್ಟು ಮಂದಿ ಹೋಮ್ ಐಸೋಲೇಶನ್ ಇಷ್ಟಪಡುತ್ತಿದ್ದಾರೆ. ನಮ್ಮಲ್ಲಿ ಸಾಮಾನ್ಯ ಹಾಸಿಗೆಯ ಕೊರತೆ ಇಲ್ಲ, ಶೇ.80ರಷ್ಟು ಹಾಸಿಗೆ ಖಾಲಿ ಇವೆ, ಇನ್ನೇನಿದ್ದರೂ ಕ್ರಿಟಿಕಲ್ ಪ್ರಕರಣಗಳ ಮೇಲಿನದ್ದೇ ಈಗ ಗುರಿ ಎಂದರು.

ದ.ಕ ಜಿಲ್ಲೆಯಲ್ಲಿ ಪ್ರತಿನಿತ್ಯ ವರದಿಯಾಗುತ್ತಿರುವ ಕೋವಿಡ್ ಪಾಸಿಟಿವ್ ರೋಗಿಗಳಲ್ಲಿ ಸರಾಸರಿ ಅರ್ಧಕ್ಕೂ ಹೆಚ್ಚು ಮಂದಿಗೆ ರೋಗ ಲಕ್ಷಣಗಳಿರುವುದಿಲ್ಲ. ಹಾಗಾಗಿ ಅವರೆಲ್ಲರೂ ಮನೆಯಲ್ಲೇ ಇರಲು ಅವಕಾಶ ಮಾಡಿಕೊಟ್ಟಿದ್ದೇವೆ, ಇದನ್ನು ನಾವು ಹಿಂದೆಯೇ ಮಾಡಬೇಕಿತ್ತು ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ.

ದ.ಕ.ದಲ್ಲಿ 4,704 ಮಂದಿಗೆ ಗೃಹವಾಸ

ದಕ್ಷಿಣ ಕನ್ನಡದಲ್ಲಿ ಇದುವರೆಗೆ 4704 ಮಂದಿ ಕೋವಿಡ್ ಪಾಸಿಟಿವ್ ಮಂದಿ ಗೃಹವಾಸಕ್ಕೆ ತೆರಳಿದ್ದು, 1,400 ಸಕ್ರಿಯ ಪ್ರಕರಣಗಳಿವೆ. ಸಾವಿರ ಮಂದಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇದ್ದಾರೆ. ದ.ಕ ಜಿಲ್ಲೆಯಲ್ಲಿ ಒಟ್ಟು 126 ಕೋವಿಡ್ ಕೇರ್ ಸೆಂಟರ್‌ಗಳಿವೆ. ಸೆಂಟರ್‌ಗಳಿಗೆ ಹೋಗಲು ಇಚ್ಛಿಸುವವರ ಸಂಖ್ಯೆ ಕಡಿಮೆ ಎನ್ನುತ್ತಾರೆ ಅಧಿಕಾರಿಗಳು. ಪ್ರತ್ಯೇಕ ಶೌಚಗೃಹ ಹೊಂದಿದ್ದರೆ, ಮನೆಯಲ್ಲೇ ಇರಲು ಅವಕಾಶ ಇರುವುದರಿಂದ ಜನರೂ ಅದನ್ನೇ ಇಷ್ಟಪಡುತ್ತಿದ್ದಾರೆ. ಮನೆಯಲ್ಲೇ ಇರಲು ಅನುವು ಮಾಡಿಕೊಟ್ಟ ಕಾರಣ ಕೋವಿಡ್ ಟೆಸ್ಟಿಂಗ್ ಪ್ರಮಾಣವೂ ಹೆಚ್ಚಿದೆ. ಪ್ರತಿದಿನ ಪಾಸಿಟಿವ್ ಸಂಖ್ಯೆ ಹೆಚ್ಚಲು ಇದು ಕಾರಣ. ಬಹುತೇಕ ಮಂದಿಗೆ ಗಂಭೀರ ಸಮಸ್ಯೆಗಳಿಲ್ಲ.

ಉಡುಪಿಯಲ್ಲಿ ಈ ಪ್ರಮಾಣ ಶೇ.40ಕ್ಕೂ ಹೆಚ್ಚು

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಆದ ಶೇ.40ಕ್ಕೂ ಅಧಿಕ ಸೋಂಕಿತರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 1997 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ, 1210 ಮಂದಿ ಮನೆಯಲ್ಲಿದ್ದಾರೆ. ಇವರೆಲ್ಲರೂ ಕೋವಿಡ್ ಲಕ್ಷಣರಹಿತರು. ಆದರೆ ಇವರಿಂದ ಸೋಂಕು ಹರಡುವ ಪ್ರಮಾಣವೂ ಹೆಚ್ಚಿರುತ್ತದೆ. ಮನೆ ಮಂದಿ ಬಗ್ಗೆ ಕಾಳಜಿ ವಹಿಸಬೇಕು. ಪ್ರತ್ಯೇಕ ಕೋಣೆ, ಶೌಚಗೃಹ ಬಳಕೆ ಕಡ್ಡಾಯ. ಜಿಲ್ಲೆಯಲ್ಲಿ ಹೋಂ ಐಸೋಲೇಶನ್ ಸೋಂಕಿತರಿಂದ ಪ್ರಾಥಮಿಕ ಸಂಪರ್ಕವಾಗಿ ಶೇ.40-45ರಷ್ಟು ಪ್ರಮಾಣದಲ್ಲಿ ಸೋಂಕು ಪಸರಿಸುತ್ತಿದೆ. ಎಚ್ಚರ ವಹಿಸಿದಲ್ಲಿ ಈ ಪ್ರಮಾಣ ತಗ್ಗಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಐಸಿಯು ಹಾಗೂ ವೆಂಟಿಲೇಟರ್ ಪ್ರಕರಣಗಳ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಸದ್ಯ 102 ವೆಂಟಿಲೇಟರ್‌ಗಳಿವೆ. ಕಳೆದ ಒಂದು ತಿಂಗಳಲ್ಲಿ 50 ಹೊಸ ವೆಂಟಿಲೇಟರ್ ಸೇರ್ಪಡೆಯಾಗಿವೆ, ಬೇಕಾದಷ್ಟು ವೈದ್ಯರು, ನರ್ಸ್‌ಗಳು ನಮ್ಮಲ್ಲಿಲ್ಲ. ಹಾಗಾಗಿ 75ನ್ನು ನಮ್ಮಲ್ಲಿ ಉಳಿಸಿಕೊಂಡು, ಉಳಿದವುಗಳನ್ನು ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಹೊರ ಜಿಲ್ಲೆಗಳಿಂದ ಹೆಚ್ಚು ಮಂದಿ ನಮ್ಮಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಿದೆ.

- ಡಾ.ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ, ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net