ಮುತುವರ್ಜಿಯಿಂದ ಆರೋಗ್ಯ ಸೇವೆ ತಲುಪಿಸಿ...

Home Health
Published on

ದಿನಕರ ಹೇರೂರು ಅಧಿಕಾರಿಗಳಿಗೆ ಸಲಹೆ

ಗೃಹ ಆರೋಗ್ಯ ಯೋಜನೆಯ ಕಾರ್ಯಾಗಾರ

ವಿಜಯವಾಣಿ ಸುದ್ದಿಜಾಲ ಉಡುಪಿ

ಗೃಹ ಆರೋಗ್ಯ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜನಸಾಮಾನ್ಯರ ಮನೆ ಬಾಗಿಲಿಗೇ ಸೇವೆ ತಲುಪಿಸಬೇಕು. ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಮರಣ ಪ್ರಮಾಣ ಕಡಿಮೆ ಮಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವುದು ಈ ಯೋಜನೆಯ ಗುರಿಯಾಗಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ, ಸಮರ್ಪಕವಾಗಿ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಸೂಚಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಜುಲೈ 21ರಂದು ಆಯೋಜಿಸಿದ್ದ ಗೃಹ ಆರೋಗ್ಯ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ, ಆಶಾ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಆರೋಗ್ಯದ ಜಾಗೃತೆ ಅಗತ್ಯ

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಆದ್ಯತೆಯಾಗಬೇಕು. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಎಚ್ಚರ ವಹಿಸಬೇಕು. ಇತ್ತೀಚೆಗಿನ ಆಹಾರ ಪದ್ಧತಿ, ಒತ್ತಡದ ಜೀವನ ಶೈಲಿಯಿಂದಾಗಿ ಆರೋಗ್ಯದಲ್ಲಿ ಹೆಚ್ಚು ಸಮಸ್ಯೆ ಕಂಡುಬರುತ್ತಿವೆ. ಕೆಲವರಿಗೆ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಅರಿವೆಯೇ ಇರುವುದಿಲ್ಲ. ಅಂತಹವರನ್ನು ಗುರುತಿಸಿ ಅವರಿರುವ ಕಡೆಯೇ ಹೋಗಿ ಸೂಕ್ತ ಚಿಕಿತ್ಸೆ ನೀಡಲು ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮ ರಾವ್​, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವೈದ್ಯರು ಉಪಸ್ಥಿತರಿದ್ದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿದರು. ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಸತೀಶ ರಾವ್​ ಕಾರ್ಯಕ್ರಮ ನಿರ್ವಹಿಸಿದರು.

ಇಂದಿನ ಜೀವನ ಶೈಲಿ ಬದಲಾವಣೆಯಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಗ್ರಾಮೀಣರು, ಬಡಜನರು ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ವಹಿಸಬಾರದು. ಜನರ ಆರೋಗ್ಯ ರಕ್ಷಣೆಗಾಗಿಯೇ ಆರಂಭಿಸಿರುವ ಗೃಹ ಆರೋಗ್ಯ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ನಗರಸಭೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. | ಪ್ರಭಾಕರ ಪೂಜಾರಿ. ಉಡುಪಿ ನಗರಸಭಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net