

ತಾವರಗೇರಾ: ಉತ್ತಮ ಆರೋಗ್ಯಕ್ಕೆ ಗರ್ಭಿಣಿಯರು, ಮಕ್ಕಳು, ಹದಿ-ಹರೆಯದವರು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಹೇಳಿದರು.
ಸಮೀಪದ ಮೆಣೇಧಾಳ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಸಪ್ತಾಹದಲ್ಲಿ ಗುರುವಾರ ಮಾತನಾಡಿದರು.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲನೇ ವಾರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಆಚರಿಸಲಾಗುತ್ತದೆ. ‘ಪೌಷ್ಟಿಕ ಆಹಾರ ಸೇವಿಸಿ ರಕ್ತಹೀನತೆ ತಡೆಗಟ್ಟಿ’ಎಂಬ ವಾಕ್ಯ ಪಾಲಿಸಬೇಕು. ಪ್ರತಿ ದಿನ ಹಸಿರು ತರಕಾರಿ, ಹಣ್ಣು ಮತ್ತು ಹಾಲಿನ ಉತ್ಪನ್ನ, ಮೊಟ್ಟೆ, ಮೀನು ಸೇವಿಸಬೇಕು. ಗರ್ಭಿಣಿಯರು ಕಬ್ಬಿಣಾಂಶ ಮಾತ್ರೆ ತೆಗೆದುಕೊಳ್ಳಬೇಕು ಎಂದರು.
ಆರೋಗ್ಯ ಸುರಕ್ಷಾಧಿಕಾರಿ ಶಂಕ್ರಮ್ಮ ಮಾತನಾಡಿ, ಆಯೋಡಿನ್‌ಯುಕ್ತ ಉಪ್ಪು, ಮೊಳೆಕೆ ಕಾಳು, ಹಸಿರು ಸೊಪ್ಪು, ಮೊಟ್ಟೆ ದಿನನಿತ್ಯ ಆಹಾರದಲ್ಲಿ ಬಳಸುವಂತೆ ಗರ್ಭೀಣಿಯರಿಗೆ ಸಲಹೆ ನೀಡಿದರು.
ಯು.ಎಚ್.ಸಿ. ಜಿಲ್ಲಾ ಸಲಹೆಗಾರ ಬಸಪ್ಪ, ಮೇಲ್ವಿಚಾರಕಿ ಶಿವಲೀಲಾ, ಪಿಎಚ್‌ಸಿಒ ಮಂಜುಳಾ, ಎಚ್‌ಐಒ ಅನ್ವರ್‌ಸಾಬ್, ಸಿಎಚ್‌ಒ ರಮೇಶ, ಆನಂದ, ಅಕ್ವೀಲ್, ಆಶಾ ಕಾರ್ಯಕರ್ತೆಯರಾದ ಶ್ಯಾಮಲಾ, ಅನುಸೂಯಾ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು ಇದ್ದರು.