

ಮಂಡ್ಯ: ಬದುಕಿನಲ್ಲಿ ಹಣ, ಅಂತಸ್ತು ಮತ್ತು ಅಧಿಕಾರವಿದ್ದರೂ ಆರೋಗ್ಯವಿಲ್ಲವಾದರೆ ಎಲ್ಲವೂ ವ್ಯರ್ಥ. ಆದ್ದರಿಂದ ಆರೋಗ್ಯವೇ ಜೀವನದ ದೊಡ್ಡ ಆಸ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗೃಹ ಆರೋಗ್ಯ ಯೋಜನೆ ಕಾರ್ಯಾಗಾರ ಉದ್ಘಾಟಿಸಿ ಹಾಗೂ ಆಶಾ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆರೋಗ್ಯವನ್ನು ಕಾನೂನು, ನೀತಿ, ನಿಬಂಧನೆಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಆದರೂ ಸಹ ಸರ್ಕಾರ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಗಾಗಿ ಮನೆ-ಮನೆಗೆ ತಲುಪಿ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದೆ. ರಾಜ್ಯದ ಪ್ರತಿಯೊಬ್ಬರೂ ಗೃಹ ಆರೋಗ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಬಡವರು, ವಯಸ್ಸಾದವರಿಗೆ ಹಾಗೂ ಅನಾರೋಗ್ಯವಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡದವರಿಗೆ ಅನುಕೂಲವಾಗಬೇಕೆಂಬುವುದೇ ಗೃಹ ಅರೋಗ್ಯ ಯೋಜನೆಯ ಉದ್ದೇಶ. ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುವ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಬಡವರಿಗೆ ಅನುಕೂಲವಾಗುವಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಎಂದು ತಿಳಿ ಹೇಳಿದರು.
ಹಿಂದಿನ ಕಾಲದದಲ್ಲಿ ಜೀವನ ಶೈಲಿ ಉತ್ತಮವಾಗಿತ್ತು. ಜತೆಗೆ ವ್ಯವಸಾಯದಲ್ಲಿ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡುತ್ತಿರಲಿಲ್ಲ. ಆದರೆ, ಪ್ರಸ್ತುತ ಸಮಾಜದಲ್ಲಿ ಜೀವನಶೈಲಿ, ಆಹಾರ ಹಾಗೂ ವ್ಯವಸಾಯ ಪದ್ಧತಿ ಎಲ್ಲವೂ ಬದಲಾಗಿದ್ದು, ಆರೋಗ್ಯದ ಮೇಲೆ ದುಷ್ಪಾರಿಣಾಮ ಬಿರುತ್ತಿದೆ. ನಮ್ಮ ಆರೋಗ್ಯ ನಮ್ಮದೇ ಹೊಣೆಯಾಗಿರುತ್ತದೆ. ಆದ್ದರಿಂದ ಎಲ್ಲರೂ ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಬೇಕು ಎಂದು ಹೇಳಿದರು.
ಸರ್ಕಾರ ಜಿಲ್ಲೆಯಲ್ಲಿ ಸಮುದಾಯ, ಜಿಲ್ಲಾ, ತಾಲೂಕು ಹಾಗೂ ತಾಯಿ-ಮಗು ಆಸ್ಪತ್ರೆಗಳನ್ನು ತೆರೆಯಲು ಕ್ರಮ ಕೈಗೊಂಡಿದೆ. ಆರೋಗ್ಯ ಬಹಳ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ಸರ್ಕಾರವು ಕೆಲಸ ನಿರ್ವಹಿಸುತ್ತಿದೆ. ನಿರಂತರ ಪ್ರಯತ್ನದಿಂದ ಅನೇಕ ಬದಲಾವಣೆಗಳನ್ನು ತರಲಾಗುವುದು ಎಂದು ತಿಳಿಸಿದರು.
ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಾ.ಜಿ.ಸಿ.ಬೆಟ್ಟಸ್ವಾಮಿ, ಡಾ.ಕುಮಾರ ಇತರರಿದ್ದರು.