ಆರೋಗ್ಯ ಸುಧಾರಣೆಗೆ ಗೃಹ ಆರೋಗ್ಯ ಸಹಕಾರಿ

AROGYA
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜನತೆಯ ಮನೆ ಬಾಗಿಲಿಗೆ ಆರೋಗ್ಯ ಸೇವೆ ಸಲ್ಲಿಸಲು ರಾಜ್ಯ ಸರ್ಕಾರವು ಗೃಹ ಆರೋಗ್ಯ ಯೋಜನೆಯನ್ನು ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಅ.24ರಿಂದ ಜಾರಿಗೆ ತಂದಿದ್ದು, ಇದುವರೆಗೆ ಒಟ್ಟು 32,510 ಮನೆಗಳಿಗೆ ಭೇಟಿ ನೀಡಿ, 70,199 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ.

ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ, ಅದು ಬರುವ ಮುನ್ನವೇ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ರೋಗವನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡಬಹುದು. ಹೊಸ ಆರೋಗ್ಯ ಯೋಜನೆಯಲ್ಲಿ, ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗೆ ಬಂದು ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರಾಮೀಣ ಭಾಗದ ಜನರ ಆರೋಗ್ಯದಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಿಂದ ಪೈಲೆಟ್​ ಪ್ರಾಜೆಕ್ಟ್​ ಆಗಿ ತೆಗೆದುಕೊಂಡಿದ್ದು ಅಂದಿನಿಂದಲೇ ತಪಾಸಣೆ ಪ್ರಾರಂಭಗೊಂಡಿದೆ. ಸಮುದಾಯ ಆರೋಗ್ಯಾಧಿಕಾರಿ, ಪ್ರಾಥಮಿಕ ಸುರಾಣಾಧಿಕಾರಿ, ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ 164 ತಂಡಗಳು ಪ್ರತಿ ಮನೆಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧ ತಲುಪಿಸಲಾಗುತ್ತಿದೆ.

ರಕ್ತದ ಒತ್ತಡ, ಮಧುಮೇಹ ಶ್ರೀಮಂತರಿಗೆ ಬರುವ ಸಮಸ್ಯೆ ಎಂಬ ಭಾವನೆಯಿತ್ತು. ಕಾಲ ಬದಲಾಗುತ್ತಿದ್ದಂತೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು, ವೃದ್ಧರಿಗೂ ಇಂತಹ ಕಾಯಿಲೆಗಳು ಹರಡುವುದು ಸಾಮಾನ್ಯವಾಗಿದೆ.

ಹರಡುತ್ತಿರುವ ಕಾಯಿಲೆಗಳನ್ನು ತಡೆಗಟ್ಟಲು ರಾಜ್ಯ, ಕೇಂದ್ರ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಅದರಡಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನ ಜಾಗೃತಿ ಮೂಡಿಸಲಾಗುತ್ತಿದೆ. ಈ ಯೋಜನೆಯಿಂದ ರೋಗಿಗಳು ಇದ್ದ ಕಡೆಗೇ ಚಿಕಿತ್ಸೆ ದೊರೆಯುವಂತಾಗಿದೆ.

ಈಗಾಗಲೇ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹವರನ್ನು ಸಮೀಪದ ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆನಂತರ ಆರು ತಿಂಗಳ ಕಾಲ ಅಗತ್ಯವಾಗಿ ಬೇಕಾಗಿರುವ ಔಷಧಗಳನ್ನು ಉಚಿತವಾಗಿ ತಲುಪಿಸಲು ಆರೋಗ್ಯ ಇಲಾಖೆಯು ಕ್ರಮವಹಿಸಿದೆ.

ಅ.24ರಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಬೆಂಗಳೂರಿನ ಬ್ಯಾಕ್ವೆಂಟ್​ ಹಾಲ್​ನಲ್ಲಿ ಯೋಜನೆಗೆ ಚಾಲನೆ ನೀಡಿ, ಜಾರಿಗೊಳಿಸಿದರು. 2025ರ ಜನವರಿಯಿಂದ ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

 ಜೀವನ ಶೈಲಿ ಬಗ್ಗೆಯೂ ಮಾಹಿತಿ

ತಂಡದ ಸಿಬ್ಬಂದಿ ಮನೆಗೆ ಭೇಟಿ ನೀಡಿ, ತಪಾಸಣೆ ನಡೆಸುವಾಗ ಯಾವುದೇ ವ್ಯಕ್ತಿಗೆ ರೋಗ ಪತ್ತೆಯಾದರೆ, ಅಗತ್ಯ ಔಷಧ ಒದಗಿಸುವುದರ ಜತೆಗೆ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಬಿಪಿ, ಶುಗರ್​ನಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗೆ ಹೋಗಲು ಆಗದೆ ಇರುವ ಪರಿಸ್ಥಿತಿಯಲ್ಲಿರುತ್ತಾರೆ. ತಂಡದ ಸಿಬ್ಬಂದಿ ತಪಾಸಣೆ ಮಾಡಿ ಔಷಧ ನೀಡುತ್ತಿರುವುದರಿಂದ ಪುನರ್ಜನ್ಮ ನೀಡಿದಂತಾಗುತ್ತಿದೆ.

ಯೋಜನೆಯ ಉದ್ದೇಶಗಳೇನು..?

ಜನ ಆರೋಗ್ಯದ ಬಗ್ಗೆ ಅರಿವು ಪಡೆಯಲು ಸಹಕಾರಿಯಾಗಿದೆ. ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಕಾಯಿಲೆಯ ತೀವ್ರತೆ ತಪ್ಪಿಸಬಹುದು. ಗಂಭೀರಮಟ್ಟದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ರಕ್ತದೊತ್ತಡ, ಮಧುಮೇಹ ಮತ್ತು ವಿವಿಧ ರೀತಿಯ ಕ್ಯಾನ್ಸರ್​ಗಳನ್ನು ತಡೆಗಟ್ಟುವುದು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸೇವೆಗಳನ್ನು ಹತ್ತಿರಕ್ಕೆ ತರುವುದು. ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು.

ಯೋಜನೆ ಅನುಷ್ಠಾನ ಕುರಿತು ಪರಿಶೀಲನೆ

ಜಿಲ್ಲೆಯಿಂದ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಎಷ್ಟರ ಮಟ್ಟಿಗೆ ಕಾರ್ಯ ರೂಪಕ್ಕೆ ತರಲಾಗುತ್ತಿದೆ ಎಂಬುದ ಬಗ್ಗೆ ಯೋಜನೆಯ ರಾಜ್ಯ ನೋಡಲ್​ ಅಧಿಕಾರಿಗಳು ಕೆಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರಾಜ್ಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕ ಡಾ.ಶ್ರೀನಿವಾಸ್​ ನೇತೃತ್ವದ ತಂಡ ಮಾಲೂರು ತಾಲೂಕಿನ ಶಿವಾರಪಟ್ಟಣ, ಆನೇಪುರ, ಕೊಂಡಶೆಟ್ಟಿಹಳ್ಳಿ, ಟೇಕಲ್​, ಬಂಗಾರಪೇಟೆ ತಾಲೂಕಿನ ಕಾರಮಂಗಲ ಗ್ರಾಮಗಳಿಗೆ ಭೇಟಿ ನೀಡಿ ಗೃಹ ಆರೋಗ್ಯ ಕಾರ್ಯಕ್ರಮ ಪ್ರಗತಿ ಕುರಿತು ಪರಿಶೀಲಿಸಿದರು. ಆರೋಗ್ಯ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾರದಲ್ಲಿ ನಾಲ್ಕು ದಿನ

ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಪ್ರತಿದಿನ 15 ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡುತ್ತಿರುವ ಸಮಯದಲ್ಲಿ ಕೆಲವರು ಲಭ್ಯವಾಗುತ್ತಿಲ್ಲ. ಅಂತಹ ಮನೆಗಳಿಗೆ ಪ್ರತಿ ತಿಂಗಳ ಮೊದಲ ಭಾನುವಾರ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ. ಈ ಯೋಜನೆಯಿಂದ ಯಾರನ್ನೂ ಕೈ ಬಿಡುವುದಿಲ್ಲ, ಶೇ.100 ಸಾಧನೆ ಮಾಡುವುದು ಗುರಿಯಾಗಿದೆ ಎಂದು ಯೋಜನೆ ಅನುಷ್ಠಾನಾಧಿಕಾರಿ ಡಾ.ನಟರಾಜ್​ ತಿಳಿಸಿದ್ದಾರೆ.

ಮುಖ್ಯಾಂಶಗಳು...

- ಆರೋಗ್ಯ ಕಾರ್ಯಕರ್ತರಿಂದ ಮನೆ ಮನೆಗೆ ಭೇಟಿ.

- ಸಾರ್ವಜನಿಕರ ಆರೋಗ್ಯ ತಪಾಸಣೆ ಮತ್ತು ದಾಖಲಾತಿ.

- ಅವಶ್ಯವಿದ್ದವರಿಗೆ ಉಚಿತ ಔಷಧ ವಿತರಣೆ.

- ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್​ ಪತ್ತೆಗೆ ಸ್ಕ್ರೀನಿಂಗ್​.

- ಅಗತ್ಯವಿರುವವರಿಗೆ ಮುಂದಿನ ಹಂತದಲ್ಲಿ ಆಯುಕ್ತ ಸ್ವಮಾನ್​ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಚಿಕಿತ್ಸೆ.

"ಗೃಹ ಆರೋಗ್ಯ ಯೋಜನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ತಂಡದ ಸಿಬ್ಬಂದಿ ತಪಾಸಣೆಗೆ ಬಂದಾಗ ಸಾರ್ವಜನಿಕರು ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಿದ್ದು, ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಗಳಿಗೆ ಶಿಾರಸು ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ."

- ಡಾ.ಶ್ರೀನಿವಾಸ್​, ಡಿಎಚ್​ಒ, ಕೋಲಾರ

"ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದು ಆರೋಗ್ಯ ತಪಾಸಣೆ ನಡೆಸಿದಾಗ ಕಾಯಿಲೆ ಪತ್ತೆಯಾದರೆ ಸಕಾಲಕ್ಕೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಇದರಿಂದಾಗಿ ವೃದ್ಧರಿಗೆಲ್ಲ ಬಹಳ ಅನುಕೂಲವಾಗುತ್ತಿದೆ."

- ಚಂದ್ರಶೇಖರ್​, ರೈತ, ಕಿರುವಾರ

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net