

ಮೈಸೂರು: ಕರೊನಾ ಹಿನ್ನೆಲೆಯಲ್ಲಿ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೂ ತೆರಳಿ ಆರೋಗ್ಯ ವಿಚಾರಿಸಲಾಗುವುದು. ಅದಕ್ಕಾಗಿ 8 ಜನರ ವೈದ್ಯರ ತಂಡ ರಚಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಕೆ.ಆರ್.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೃಷ್ಣಮೂರ್ತಿಪುರಂನ ಮಕ್ಕಳ ಕೂಟದ ಆವರಣದಲ್ಲಿ ಗುರುವಾರ ಕರೊನಾ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಕುಟುಂಬಸ್ಥರ ಆರೋಗ್ಯ ಸ್ಥಿತಿ ಬಗ್ಗೆ ಅವಲೋಕಿಸಿ ಪಟ್ಟಿ ಮಾಡಿದ್ದಾರೆ. ಅದರಲ್ಲಿ ಹೃದಯ ಸಂಬಂಧಿ ಸಮಸ್ಯೆಯುಳ್ಳವರು, ಅಸ್ತಮಾ, ಉಸಿರಾಟದ ಸಮಸ್ಯೆ, ರಕ್ತದೊತ್ತಡ, ಮಧುಮೇಹ ಇನ್ನಿತರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವವರ ಪಟ್ಟಿ ಮಾಡಲಾಗಿದ್ದು, ಅಂತಹವರಿಗೆ ಸೋಂಕು ತಗುಲದಂತೆ ಕಟ್ಟೆಚ್ಚರ ವಹಿಸುವಂತೆ ಹಾಗೂ ಸೋಂಕಿನಿಂದ ಸಮಸ್ಯೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆರಂಭದಲ್ಲೇ ಚಿಕಿತ್ಸೆ ನೀಡಲು ವೈದ್ಯರು ಕ್ರಮ ವಹಿಸಲಿದ್ದಾರೆ ಎಂದರು.
ಕರೊನಾ ನಿರ್ವಹಣೆಗಾಗಿ ಕ್ಷೇತ್ರವನ್ನು ಮೂರು ವಲಯವಾಗಿ ವಿಂಗಡಿಸಲಾಗಿದೆ. ಕೃಷ್ಣಮೂರ್ತಿಪುರಂನಲ್ಲಿರುವ ಮಕ್ಕಳ ಕೂಟ, ಚಾಮುಂಡಿಬೆಟ್ಟದಲ್ಲಿರುವ ಬಾಡಿ ಗಾರ್ಡ್ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಾಚನಹಳ್ಳಿ ಪಾಳ್ಯದಲ್ಲಿ ತಲಾ ಒಂದು ಕೋವಿಡ್ ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಜನರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಎಂದರು.
ಕ್ಷೇತ್ರದ ಮೂರು ವಲಯಗಳಿಗೂ ತಲಾ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ತುರ್ತು ಪರಿಸ್ಥಿತಿಗೆ ಅವಶ್ಯಕವಾಗಿ ಬೇಕಾಗುವ ಆಮ್ಲಜನಕದ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದರು.
ಕರೊನಾಕ್ಕೆ ಸಂಬಂಧಿಸಿದಂತೆ ಜು.24ರಂದು ಸಹಾಯವಾಣಿ ತೆರೆಯಲಾಗುವುದು. ಇದಕ್ಕಾಗಿ ಸಿಬ್ಬಂದಿ ನಿಯೋಜಿಸಲಾಗಿದ್ದು, ಹೆಲ್ಪ್‌ಲೈನ್ ಮೂಲಕ ಕ್ಷೇತ್ರದ ಜನರ ಆರೋಗ್ಯ ವಿಚಾರಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.
ಕೆ.ಆರ್.ಕ್ಷೇತ್ರದಲ್ಲಿ 115 ಕಂಟೇನ್ಮೆಂಟ್ ವಲಯಗಳಿವೆ. ಸೋಂಕಿತರಿದ್ದ ಮನೆ ಒಳಗೆ ಹಾಗೂ ಹೊರಗೆ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಕಾರ್ಯ ನಡೆಸಲಾಗುತ್ತಿದೆ. ಹೋಮ್ ಕ್ವಾರಂಟೈನ್‌ನಲ್ಲಿರುವ ಜನರಿಗೆ ತರಕಾರಿ ಇನ್ನಿತರ ವಸ್ತುಗಳ ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮಹಾದೇವಪ್ರಸಾದ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಕೆ.ಆರ್.ಕ್ಷೇತ್ರದ ನೋಡಲ್ ಅಧಿಕಾರಿ ಜಯಸಿಂಹ, ಪಾಲಿಕೆ ಎಸಿ ಕುಮಾರ್‌ನಾಯಕ್ , ಅಭಿವೃದ್ಧಿ ಅಧಿಕಾರಿ ನಂಜುಂಡೇಗೌಡ ಇತರರು ಹಾಜರಿದ್ದರು.