

ಮಾಗಡಿ: ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ನಾಣ್ಯದ ಎರಡು ಮುಖಗಳಿದಂತೆ ಎಂದು ರಾಮನಗರ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಎಸ್.ಗಿರೀಶ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೋಟರಿ ಮಾಗಡಿ ಸೆಂಟ್ರಲ್ ಮಂಗಳವಾರ ಏರ್ಪಡಿಸಿದ್ದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಹಿನ್ನೆಲೆಯಲ್ಲಿ ರಕ್ತದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕರೊನಾ ಹಾಗೂ ಗ್ರಾಪಂ ಚುನಾವಣೆ ಸಮಯದಲ್ಲಿ ಗೃಹರಕ್ಷಕ ದಳ ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಪೋಲಿಸ್ ಇಲಾಖೆ ಮತ್ತು ಗೃಹರಕ್ಷಕ ದಳದವರು ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದರೆ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡಬಹುದು. ಆರೋಗ್ಯವಂತ ಯುವಕರು ಮತ್ತು ಯುವತಿಯರು ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಅಲ್ಲದೆ ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು. ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಬಿ.ಎಸ್. ಮಂಜುನಾಥ್ ಮಾತನಾಡಿ, ರಕ್ತದಾನ ಮಾಡುವುದರಿಂದ ವ್ಯಕ್ತಿಯ ಜ್ಞಾಪಕ ಶಕ್ತಿ ವೃದ್ಧಿಯಾಗುವುದರ ಜತೆಗೆ ರಕ್ತದಲ್ಲಿನ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ರಕ್ತದಾನದಿಂದ ಹೃದಯಾಘಾತ ಸಂಭವಿಸುವುದನ್ನು ತಡೆಯಬಹುದಾಗಿದೆ ಎಂದರು.
ಗೃಹರಕ್ಷಕ ದಳದ ಎಎಸ್ಐ ಶಿವನಂಜಯ್ಯ ಮಾತನಾಡಿ, ಎಬಿ ಹಾಗೂ ಒ ನೆಗಟಿವ್ ಗುಂಪಿನ ರಕ್ತ ನೂರರಲ್ಲಿ ಒಬ್ಬರಲ್ಲಿ ಮಾತ್ರ ಹರಿಯುತ್ತದೆ. ವಿದ್ಯಾರ್ಥಿಗಳು ರಕ್ತದ ಗುಂಪನ್ನು ತಿಳಿದುಕೊಂಡಿದ್ದು, ಅಗತ್ಯವಿದ್ದವರಿಗೆ ರಕ್ತದಾನ ಮಾಡಬೇಕು ಎಂದರು.
ಮಾಗಡಿ ರೋಟರಿ ಕಾರ್ಯದರ್ಶಿ ಮಹಂತೇಶ್ ಮಾತನಾಡಿದರು. ಶಿಬಿರದಲ್ಲಿ 45 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್. ಮಂಜುನಾಥ್ ರಕ್ತದಾನ ಮಾಡಿದರು.
ಮಾಗಡಿ ರೋಟರಿ ಸೆಂಟ್ರಲ್ ಅಧ್ಯಕ್ಷ ಎಂ.ಎಸ್. ಪುರುಷೋತ್ತಮ್ ಕಾರ್ಯದರ್ಶಿ ಮಹಂತೇಶ್, ಡಾ.ಮಂಜುನಾಥ್, ಗೃಹರಕ್ಷಕ ದಳ ಸಿಬ್ಬಂದಿಗಳಾದ ನಿರಂಜನ್, ಗಾಯಕ್ವಾಡ್, ವೆಂಕಟೇಶ್, ವಿಜಯ್ಕುಮಾರ್, ಅಭಿಲಾಷ್, ಕುಮಾರ್ ಭಾಗವಹಿಸಿದ್ದರು.