

ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡುವ ಮೂಲಕ ಕ್ಷೇತ್ರದ ಜನರಿಗೆ ಮನೆ ಬಾಗಿಲಲ್ಲೇ ಎಲ್ಲ ರೀತಿಯ ಸರ್ಕಾರಿ ಸೇವೆ ದೊರಕುವಂತೆ ಮಾಡಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ತಾಲೂಕು ಬಹಳ ದೊಡ್ಡದಿದೆ. ತಾಲೂಕಿನ ಸರ್ಕಾರಿ ಕಚೇರಿಗಳ ಮೇಲೆ ಒತ್ತಡ ಬಹಳವಿದೆ. ಹಾಗಾಗಿ ಗ್ರಾಮೀಣ ತಾಲೂಕು ರಚನೆಯಾಗುವುದು ಅಗತ್ಯವಿದೆ. ಈ ಬಾರಿ ಆಯ್ಕೆಯಾದ ನಂತರ ಮೊದಲ ಆದ್ಯತೆಯಾಗಿ ಗ್ರಾಮೀಣ ತಾಲೂಕು ರಚನೆಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿಯೇ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ, ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಪ್ರತ್ಯೇಕ ತಾಲೂಕು ರಚನೆ ನನ್ನ ಮೊದಲ ಆದ್ಯತೆಯಾಗಲಿದೆ. ಖಂಡಿತ ಇದು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಜನರು ಎಲ್ಲ ಸರ್ಕಾರಿ ಕೆಲಸಗಳಿಗೆ ಬೆಳಗಾವಿ ನಗರಕ್ಕೆ ಹೋಗಬೇಕಿದೆ. ಅಲ್ಲಿಯ ಕಚೇರಿಗಳಲ್ಲಿ ಕೆಲಸದ ಒತ್ತಡದಿಂದಾಗಿ ಸುಲಭವಾಗಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ಸಮಯ, ಶ್ರಮ, ಹಣ ವ್ಯಯವಾಗುತ್ತಿದೆ. ಹಾಗಾಗಿ, ನಮ್ಮ ಕಚೇರಿ ಮೂಲಕ ಈಗಾಗಲೆ ಜನರಿಗೆ ಈ ಕುರಿತು ಸಹಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ತಾಲೂಕಾದರೆ ತಹಸೀಲ್ದಾರ್ ಕಚೇರಿ ಸೇರಿ ಎಲ್ಲ ಕಚೇರಿಗಳೂ ಕ್ಷೇತ್ರಕ್ಕೆ ಬರಲಿವೆ. ಆಗ ಕೆಲಸದ ಒತ್ತಡ ಕಡಿಮೆಯಾಗುವುದರಿಂದ ಕೆಲಸ ಮಾಡಿಸಿಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಜನರಿಗೆ ಅಗತ್ಯ ಸಹಾಯ ಮಾಡಲೆಂದೇ ನಮ್ಮ ಕಚೇರಿಯಲ್ಲೂ ಪೂರ್ಣಾವಧಿ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಕನಿಷ್ಠ 6 ತಿಂಗಳಿಗೊಮ್ಮೆ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಅಹವಾಲು ಆಲಿಕೆ ಸಭೆ ಆಯೋಜಿಸಲಾಗುವುದು. ತನ್ಮೂಲಕ ಮನೆ ಬಾಗಿಲಲ್ಲೇ ಸರ್ಕಾರಿ ಸೇವೆ ಒದಗಿಸಲಾಗುವುದು ಎಂದು ಎಂದು ಲಕ್ಷ್ಮೀ ಭರವಸೆ ನೀಡಿದ್ದಾರೆ. ಕಳೆದ ವರ್ಷ ಪ್ರಾಯೋಗಿಕವಾಗಿ ಇಂತಹ ಸಭೆಗಳನ್ನು ಆಯೋಜಿಸಲಾಗಿತ್ತು. ಅದು ಅತ್ಯಂತ ಯಶಸ್ವಿಯೂ ಆಗಿತ್ತು. ವಿವಿಧ ಮಾಸಾಶನ, ಪಡಿತರ ಚೀಟಿ, ಬೇರೆ ಬೇರೆ ರೀತಿಯ ಸರ್ಕಾರಿ ಸೇವೆಗಳನ್ನು ಜನರು ಮನೆ ಬಾಗಿಲಲ್ಲೇ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಿ, ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸೇವೆ ಒದಗಿಸುವ ಮೂಲಕ ಗ್ರಾಮೀಣ ಜನರು ಕಚೇರಿಗಳಿಗೆ ಸುತ್ತುವುದನ್ನು ತಪ್ಪಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಳ್ಕರ್ ತಿಳಿಸಿದ್ದಾರೆ.