

ಪ್ರಕಾಶ್ ಮಂಜೇಶ್ವರ ಮಂಗಳೂರು
ಬ್ಯಾಂಕ್ ಉದ್ಯೋಗಿಗಳಾಗಿ ನಾವು ಪತಿ-ಪತ್ನಿ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿ ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಇಲ್ಲಿ ನೆಲೆಸಿದ್ದೇವೆ. ವಯೋಸಹಜ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಆರು ತಿಂಗಳ ಹಿಂದೆ ಒಳಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭ ಬಳಿಕ ಅಕ್ಷರಶಃ ನಾವು ಗೃಹಬಂಧಿಗಳಾಗಿದ್ದೇವೆ.
-ಇದು ಮಂಗಳೂರು ನಗರದ ಕೊಟ್ಟಾರ ಇನ್ಫೋಸಿಸ್ ಕಟ್ಟಡದ ಕೂಗಳತೆಯ ದೂರದಲ್ಲಿರುವ ವಸತಿ ದಟ್ಟಣೆಯ ದ್ವಾರಕ ನಗರ ವಾಸಿ ಪಿ.ರಘುನಾಥ್ ಕಾಮತ್ ದಂಪತಿ ಅಳಲು.
ಹೊರಗೆ ಸುಡುವ ಬಿಸಿಲು, ಮನೆ ಒಳಗೆ ಉರಿವ ಧಗೆ ಇದ್ದರೂ ಯಾರೊಬ್ಬರೂ ಮನೆ ಕಿಟಕಿ-ಬಾಗಿಲುಗಳನ್ನು ತೆರೆಯುವಂತಿಲ್ಲ. ಬೆಳಗ್ಗೆ ಮತ್ತು ಸಂಜೆಯ ತಿಳಿಗಾಳಿಗೆ ಮೈಯೊಡ್ಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಮನೆಗಳಿಗೂ ದಿನವಿಡೀ ಬಾಗಿಲು. ಅವಶ್ಯ ಸಾಮಗ್ರಿ ತರಲು ಹೊರಗೆ ಓಡಾಡುವ ಒಂದಿಬ್ಬರು ಹೊರತುಪಡಿಸಿದರೆ ಮುಖ್ಯ ರಸ್ತೆ ಮಗ್ಗುಲಿಗೆ ಇರುವ ಈ ಪ್ರದೇಶ ಬಹುತೇಕ ನಿರ್ಜನ.
ಕಾಮಗಾರಿ ತಂದ ಸಮಸ್ಯೆ: ಸರ್ಕಾರದ ಮಹಾಕಾಂಕ್ಷೆಯ ಅಮೃತ್ ಯೋಜನೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಮತ್ತು ಪೂರಕವಾಗಿ ನಡೆದ ರಸ್ತೆ ದುರಸ್ತಿಯಿಂದ ಸ್ಥಳೀಯ ನಿವಾಸಿಗಳು ನೆಮ್ಮದಿ ಕಳೆದುಕೊಂಡಿದ್ದಾರೆ. ಕಾಮಗಾರಿ ಸಂದರ್ಭ ತೆಗೆದಿಟ್ಟಿದ್ದ ರಸ್ತೆಯ ಇಂಟರ್‌ಲಾಕ್‌ಗಳನ್ನು ಬೇರೆ ರಸ್ತೆಯಲ್ಲಿ ಬಳಸಲೆಂದು ಯಾರೋ ಕೊಂಡೊಯ್ದಿದ್ದಾರೆ. ರಸ್ತೆ ಧೂಳಿನಿಂದ ಆವೃತವಾಗಿದೆ.
ಮುಗಿಯದ ಕಾಮಗಾರಿ: ಅಮೃತ ಯೋಜನೆಯಡಿ ಇಲ್ಲಿ ರಸ್ತೆ ಅಗೆದು ಚರಂಡಿ ಕಾಮಗಾರಿ ಆರಂಭಿಸಿ ಆರು ತಿಂಗಳುಗಳೇ ಕಳೆದಿವೆ. ಕಾಮಗಾರಿ ಆರಂಭ ಸಂದರ್ಭ ಸುಸಜ್ಜಿತ ಚರಂಡಿ ನಿರ್ಮಾಣವಾಗುತ್ತದೆ ಎಂದು ಸಂಭ್ರಮಿಸಿದ್ದ ಜನರ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ವಾಹನ ಸಂಚರಿಸುವಾಗ ಪದೇ ಪದೇ ತುಂಡಾಗುತ್ತಿರುವ ನೀರಿನ ನಳ್ಳಿ, ಮಳೆ ಬಂದಾಗ ಕೆಸರಲ್ಲಿ ಹೂತು ಹೋಗುವ ವಾಹನಗಳು. ಹೀಗೆ ದಿನಕ್ಕೊಂದು ಅಧ್ವಾನ ಜನರಿಗೆದುರಾಗುತ್ತಿದೆ. ಡಿ.2ರಂದು ಈ ಸಮಸ್ಯೆ ಬಗ್ಗೆ ‘ವಿಜಯವಾಣಿ’ ವರದಿ ಮಾಡಿತ್ತು. ಸಮಸ್ಯೆ ಶೀಘ್ರ ಇತ್ಯರ್ಥಪಡಿಸುವ ಬಗ್ಗೆ ಶಾಸಕರು ಹೇಳಿರುವ ಮಾತನ್ನು ಪತ್ರಿಕೆ ಉಲ್ಲೇಖಿಸಿತ್ತು.
ನಾವು ಹೊಸ ಚರಂಡಿ ಕೇಳಿಲ್ಲ. ಹಳೇ ಪಿಟ್ ವ್ಯವಸ್ಥೆಯಿಂದ ನಮಗೆ ಸಮಸ್ಯೆಯಿರಲಿಲ್ಲ. ಇಂಟರ್‌ಲಾಕ್ ರಸ್ತೆಯಿಂದ ಕೂಡ ನಮ್ಮ ನೆಮ್ಮದಿ ಹಾಳಾಗಿರಲಿಲ್ಲ. ಆದರೆ ಈಗ ಬದುಕುವುದು ದುಸ್ತರವಾಗಿದೆ. ಸಂಪರ್ಕ ರಸ್ತೆಗಳೇ ಅಸ್ತವ್ಯಸ್ತಗೊಂಡಿವೆ. ಚರಂಡಿ ಅವ್ಯವಸ್ಥೆಯಿಂದ ಪರಿಸರದಲ್ಲಿ ನೊಣಗಳ ಕಾಟ ಕೂಡ ಹೆಚ್ಚಾಗಿದೆ. ಮಹೇಶ್ ಕಾಮತ್, ಸ್ಥಳೀಯ ನಿವಾಸಿ ಕರೊನಾ ಕಾಲದಲ್ಲಿ ಹಿರಿಯ ಜೀವಗಳಿಗೆ ಶಿಕ್ಷೆ ನೀಡಬಾರದು. ಮನೆಯ ಹೊರಗೂ ಹೆಚ್ಚು ಓಡಾಡುವ ಹಾಗಿಲ್ಲ. ಒಳಗೂ ಇರುವ ಇಲ್ಲ. ಸಮಸ್ಯೆಗೆ ಆಡಳಿತ ವ್ಯವಸ್ಥೆ ಶೀಘ್ರ ಪರಿಹಾರ ಕಂಡುಹಿಡಿಯಬೇಕು. ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು. ಪಿ.ರಘುನಾಥ್ ಕಾಮತ್ ದಂಪತಿ, ಸ್ಥಳೀಯರು.