

ಮಂಜುನಾಥ ಅಂಗಡಿ ಧಾರವಾಡ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಅತಿಯಾದ ಮಳೆಗೆ ಮನೆಗಳಿಗೆ ಹಾನಿಯಾದ ಸಂತ್ರಸ್ತರಿಗೆ ಪರಿಹಾರ ಸಿಗುತ್ತಾ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಕಾಂಗ್ರೆಸ್ ಸರ್ಕಾರ ಹಿಂದಿನ ನಿಯಮಾವಳಿಗಳನ್ನೇ ಮುಂದುವರಿಸಿ, ಪರಿಹಾರದ ಭಾಗ್ಯ ಕಲ್ಪಿಸಿದೆ. ಮನೆ ಹಾನಿ ಸಂತ್ರಸ್ತರನ್ನು ಗುರುತಿಸುವಲ್ಲಿ ಪಾರದರ್ಶಕತೆ ಪಾಲಿಸಲು ಸೂಚಿಸಲಾಗಿದ್ದು, ಲೋಪವಾದರೆ ಅಧಿಕಾರಿ, ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.
ಜೂನ್ನಲ್ಲಿ ಕೈ ಕೊಟ್ಟಿದ್ದ ಮಳೆ ಜುಲೈನಲ್ಲಿ ಕೊಂಚ ಹೆಚ್ಚಾಗಿದೆ. ಇದರಿಂದ ಶಿಥಿಲಾವಸ್ಥೆಯಲ್ಲಿದ್ದ ಮನೆಗಳಿಗೆ ಹಾನಿಯಾಗಿದ್ದು, ವರದಿ ಮಾಡಲು ಜಿಲ್ಲಾಡಳಿತ ಸೂಚಿಸಿತ್ತು. ಅದರಂತೆ ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಫೋಟೋ ಸಮೇತ ವರದಿ ಮಾಡಿಟ್ಟುಕೊಂಡಿದ್ದಾರೆ. ಆದರೆ, ಸರ್ಕಾರದ ಪರಿಹಾರದ ಆದೇಶ ಬರುವವರೆಗೆ ಜಿಲ್ಲಾಧಿಕಾರಿಯಿಂದ ಅನುಮೋದನೆ ಸಿಕ್ಕಿರಲಿಲ್ಲ.
ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಆ. 3ರಂದು ಆದೇಶ ಹೊರಡಿಸಿದ್ದು, ಹಾನಿಯಾದ ಮನೆಗಳಿಗೆ ಪರಿಹಾರ ನಿಗದಿಪಡಿಸಲಾಗಿದೆ. ಶೇ. 75ಕ್ಕಿಂತ ಹೆಚ್ಚಿನ ಸಂಪೂರ್ಣ ಹಾನಿಯಾದ ಮನೆಗಳನ್ನು ಎ ವರ್ಗಕ್ಕೆ ಸೇರಿಸಿ 5 ಲಕ್ಷ ರೂ. ಪರಿಹಾರ, ಶೇ. 25ರಿಂದ 75ರವರೆಗೆ ತೀವ್ರ ಹಾನಿಯಾದ ಬಿ1 ವರ್ಗದ ಮನೆಗಳಿಗೆ 3 ಲಕ್ಷ ರೂ. (ದುರಸ್ತಿ), ಶೇ. 25ರಿಂದ 75ರವರೆಗೆ ತೀವ್ರ ಹಾನಿಯಾದ ಬಿ2 ವರ್ಗದ ಮನೆಗಳಿಗೆ 5 ಲಕ್ಷ ರೂ. (ಕೆಡವಿ ಹೊಸದಾಗಿ ನಿರ್ವಿುಸುವುದು) ಹಾಗೂ ಶೇ. 15ರಿಂದ 25ರವರೆಗೆ ಭಾಗಶಃ ಹಾನಿಯಾದ ಸಿ ವರ್ಗದ ಮನೆಗಳಿಗೆ 50,000 ರೂ. ಪರಿಹಾರ ನಿಗದಿಪಡಿಸಲಾಗಿದೆ.
2019ರ ಮಹಾಮಳೆಯ ನಂತರ ಮನೆ ಹಾನಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರದ ಭಾಗ್ಯ ಲಭಿಸುತ್ತಿದೆ. ಜಿಲ್ಲೆಯಲ್ಲಿ 2019ರಿಂದ 2022ರವರೆಗೆ ಸತತ 4 ವರ್ಷಗಳ ಕಾಲ ಹಾನಿಯಾದ ಮನೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಈ ಬಾರಿ ಮುಂಗಾರು ಕೊಂಚ ತಡವಾಗಿ ಆರ್ಭಟಿಸಿದ್ದು, ಮನೆಗಳಿಗೆ ಹಾನಿಯಾಗಿದೆ. ಅರ್ಹ ಫಲಾನುಭವಿಗಳ ಆಯ್ಕೆ ಮತ್ತು ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜೂ. 1ರ ನಂತರ ಹಾನಿಯನ್ನು ಪರಿಗಣಿಸಿ ಎ, ಬಿ1, ಬಿ2, ಸಿ ಎಂದು ವರ್ಗೀಕರಿಸಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ (ಆರ್ಜಿಆರ್ಎಚ್ಸಿಎಲ್) ತಂತ್ರಾಂಶದಲ್ಲಿ ದಾಖಲಿಸಬೇಕು. ನಿಯಮಾನುಸಾರ ಜಂಟಿ ಸ್ಥಳ ತನಿಖೆಯ ವರದಿ ಬಂದು ಜಿಲ್ಲಾಧಿಕಾರಿ ಪರಿಶೀಲಿಸಿದ ನಂತರ 20 ದಿನಗಳಲ್ಲಿ ತುರ್ತು ಪರಿಹಾರ ಪಾವತಿಸಬೇಕು. ಮನೆ ಹಾನಿ ಪರಿಹಾರ ಪಾವತಿಸಿದ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಅಧಿಕೃತ ಜಾಲತಾಣ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಪ್ರಕಟಿಸಬೇಕು. ಪರಿಹಾರ ವಿತರಿಸಿರುವ ಕುಟುಂಬವಾರು ವೆಚ್ಚದ ಲೆಕ್ಕಗಳನ್ನು ಜಿಲ್ಲಾಧಿಕಾರಿ ನಿರ್ವಹಿಸಬೇಕು. ವೆಚ್ಚದ ಬಳಕೆ ಪ್ರಮಾಣಪತ್ರವನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ಸೂಚಿಸಿದೆ.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈವರೆಗೆ 18 ತೀವ್ರತರ ಸೇರಿ ಅಂದಾಜು 700 ಮನೆಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಗ್ರಾಮ ಆಡಳಿತಾಧಿಕಾರಿಗಳು ವರದಿ ಮಾಡಿದ ಹಾನಿ ಪ್ರಕರಣಗಳ ಜಂಟಿ ಪರಿಶೀಲನೆಗೆ ಜಿಲ್ಲಾಡಳಿತ ವಿವಿಧ ಇಲಾಖೆಗಳ ಇಂಜಿನಿಯರ್ಗಳನ್ನು ಇನ್ನಷ್ಟೇ ನೇಮಿಸಬೇಕಿದೆ.
ಮನೆ ಹಾನಿ ಸಂತ್ರಸ್ತರಿಗೆ ಪರಿಹಾರ ನಿಗದಿಪಡಿಸಿ ಸರ್ಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಮನೆ ಹಾನಿ ಪ್ರಕರಣಗಳು ವರದಿಯಾಗಿವೆ. ಗ್ರಾಮ ಆಡಳಿತಾಧಿಕಾರಿಗಳು ಈವರೆಗಿನ ಹಾನಿ ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಜಂಟಿ ಪರಿಶೀಲನೆಗೆ ತಂಡಗಳನ್ನು ಶೀಘ್ರದಲ್ಲೇ ರಚಿಸಲಾಗುವುದು. ಸರ್ಕಾರದ ನಿಯಮಾವಳಿಯಂತೆ ಹಾನಿ ಪ್ರಮಾಣದ ಅನ್ವಯ ವರ್ಗವಾರು ವಿಂಗಡಿಸಿ ಪರಿಹಾರಕ್ಕೆ ಅರ್ಹಗೊಳಿಸಲಾಗುವುದು. | ಗೀತಾ ಸಿ.ಡಿ. ಅಪರ ಜಿಲ್ಲಾಧಿಕಾರಿ