

ಬೆಳಗಾವಿ: ಕಳೆದ ವರ್ಷ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಮನೆ ಕಳೆದುಕೊಂಡ ಜಿಲ್ಲೆಯ 44,156 ಸಂತ್ರಸ್ತರಿಗೆ ಸರ್ಕಾರ, 2020 ಆಗಸ್ಟ್ 8ರ ವರೆಗೆ 488.74 ಕೋಟಿ ರೂ. ಪರಿಹಾರ ನೀಡಿದೆ.
ಮನೆ ಉತಾರ, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಸೇರಿದಂತೆ ಇನ್ನಿತರ ದಾಖಲೆಗಳ ಹೊಂದಾಣಿಕೆ ಆಗದಿರುವ ಹಿನ್ನೆಲೆಯಲ್ಲಿ 9,060 ಫಲಾನುಭವಿಗಳಿಗೆ ಪರಿಹಾರ ಬಿಡುಗಡೆ ಆಗಿಲ್ಲ. ಸದ್ಯ ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯವೂ ಸ್ಥಗಿತಗೊಂಡಿದೆ.
2019-20ನೇ ಸಾಲಿನಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ 972 ಗ್ರಾಮಗಳು ಜಲಾವೃತಗೊಂಡು 1,12,483 ಕುಟುಂಬಗಳ ಮನೆಗಳು ಹಾನಿಗೊಳಗಾಗಿದ್ದವು. ಇದರಲ್ಲಿ 25 ಸಾವಿರಕ್ಕೂ ಅಧಿಕ ಮನೆಗಳು ಅಲ್ಪಸ್ವಲ್ಪ ಹಾನಿಗೊಂಡಿದ್ದವು. ಮನೆ ಹಾನಿಯಾದ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರವು ಎ, ಬಿ ಮತ್ತು ಸಿ ವಿಭಾಗವಾಗಿ ವಿಂಗಡಿಸಿ ಪರಿಹಾರ ಘೋಷಿಸಿತ್ತು.
ಬಾಕಿ ಶೀಘ್ರ ಬಿಡುಗಡೆ: ಈಗಾಗಲೇ ಬಿ ಮತ್ತು ಸಿ ಕೆಟಗರಿಯ ಫಲಾನುಭವಿಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಎ ಕೆಟಗರಿಯ ಫಲಾನುಭವಿಗಳಿಗೆ 5 ಲಕ್ಷ ರೂ. ಪರಿಹಾರವನ್ನು 5 ಕಂತುಗಳಾಗಿ ನೀಡಲಾಗುತ್ತಿದೆ. ಅದರಲ್ಲಿ ಈಗಾಗಲೇ 3 ರಿಂದ 4 ಕಂತು ಹಣ ಬಿಡುಗಡೆ ಆಗಿದೆ. ಬಾಕಿ ಉಳಿದಿರುವ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ತಾಲೂಕು ತಹಸೀಲ್ದಾರರು ತಿಳಿಸಿದ್ದಾರೆ.
| ಮಂಜುನಾಥ ಕೋಳಿಗುಡ್ಡ ಬೆಳಗಾವಿ