ಸಮಾಜದ ಹಿತಕ್ಕಾಗಿ ಅಧಿಕಾರ ಸದ್ವಿನಿಯೋಗಿಸಿ

UDP-21-1-Lombard
ಉಡುಪಿಯ ಲೊಂಬಾರ್ಡ್​ ಆಸ್ಪತ್ರೆಯಲ್ಲಿ ಹೋಮ್​ ಕೇರ್​ ಸರ್ವೀಸ್​ ಹಾಗೂ ನೇತ್ರಶಾಸ್ತ್ರ ವಿಭಾಗವನ್ನು ಬಿಷಪ್​ ಹೇಮಚಂದ್ರಕುಮಾರ್​ ಉದ್ಘಾಟಿಸಿದರು. ಡಾ.ಸುಶೀಲ್​ ಜತ್ತಣ್ಣ, ಡಾ. ಆರ್ಥರ್​ ರೋಡ್ರಿಗಸ್​, ಡಾ.ನರೇಂದ್ರ ಶೆಣೈ, ಡಾ.ಗಣೇಶ್​ ಕಾಮತ್​, ಭಾರತಿ ಹೇಮಚಂದ್ರ, ಐವಾನ್​ ಡಿಸೋನ್ಸ್​ ಇದ್ದರು.
Published on

ಬಿಷಪ್​ ಹೇಮಚಂದ್ರಕುಮಾರ್​ ಸಲಹೆ | ಹೋಮ್​ ಕೇರ್​ ಸೇವೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಬೆಳಕನ್ನು ಹೊತ್ತಿಸಿ ಅದನ್ನು ಮುಚ್ಚಿಡಬಾರದು. ಆ ಬೆಳಕು ಇನ್ನೊಬ್ಬರಿಗೆ ಆಸರೆಯಾಗಬೇಕು. ಅಂಧಕಾರವನ್ನು ನೀಗಿಸುವಂತಾಗಬೇಕು. ದೇವರು ನಮಗೆ ಕರುಣಿಸಿರುವ ಅಧಿಕಾರವನ್ನು ಸಮಾಜದ ಹಿತಕ್ಕಾಗಿ ಸದ್ವಿನಿಯೋಗ ಮಾಡಬೇಕು ಎಂದು ಸಿಎಸ್​ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್​ ರೈ.ರೆ. ಹೇಮಚಂದ್ರಕುಮಾರ್​ ಸಲಹೆ ನೀಡಿದರು.

ಉಡುಪಿಯ ಸಿಎಸ್​ಐ ಲೊಂಬಾರ್ಡ್​ ಸ್ಮಾರಕ (ಮಿಷನ್​) ಆಸ್ಪತ್ರೆಯ ಚಾಪೆಲ್​ ಪ್ರಾರ್ಥನಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಲೊಂಬಾರ್ಡ್​ ಹೋಮ್​ ಕೇರ್​ ಸರ್ವೀಸ್​ ಹಾಗೂ ನೇತ್ರಶಾಸ್ತ್ರ ವಿಭಾಗ ಉದ್ಘಾಟಿಸಿ ಮಾತನಾಡಿದರು.

ಮಾದರಿಯಾಗಲಿ ಉಡುಪಿ

ಎಲ್ಲರನ್ನೂ ಸಂತೈಸುವ, ಆರೈಕೆ ಮಾಡುವ ಅವಕಾಶ ದೇವರಿಂದ ನಮಗೆ ಲಭಿಸಿದೆ. ಬೋಧನೆ, ಆರೋಗ್ಯ ಹಾಗೂ ಉಪದೇಶ ಕ್ರೈಸ್ತ ಮಿಷನರಿಯ ಮುಖ್ಯ ಉದ್ದೇಶ. ಈ ತತ್ವದ ಹಿನ್ನೆಲೆಯಲ್ಲಿಯೇ ಲೊಂಬಾರ್ಡ್​ ಆಸ್ಪತ್ರೆಯ ವೈದ್ಯರು ರೋಗಿಗಳ ಮನೆಗೇ ತೆರಳಿ ಅಗತ್ಯ ಆರೋಗ್ಯ ಸೇವೆ ನೀಡಲಿದ್ದಾರೆ. ಈ ಸೇವೆಯ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಮಾದರಿಯಾಗಲಿ ಎಂದು ಹಾರೈಸಿದರು.

ಹಿರಿಯರಿಗೆ ಆಸರೆ

ಕನ್ಸಲ್ಟೆಂಟ್​ ನೇತ್ರತಜ್ಞ ಡಾ.ನರೇಂದ್ರ ಶೆಣೈ ಮಾತನಾಡಿ, 1990ರ ದಶಕದಲ್ಲಿ ಲೊಂಬಾರ್ಡ್​ ಆಸ್ಪತ್ರೆಯು ನೇತ್ರಶಾಸ್ತ್ರ ಸೇವೆಗೆ ಹೆಸರುವಾಸಿಯಾಗಿತ್ತು. ಆದರೆ, ಹೊರರೋಗಿ ಸೇವೆ ಲಭ್ಯವಿರಲಿಲ್ಲ. ಇದೀಗ ಆರಂಭಿಸಿರುವ ಮನೆ ಆರೈಕೆಯ ಸೇವೆ, ಹಿರಿಯ ಜೀವಗಳಿಗೆ ಆಸರೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನೇತ್ರತಜ್ಞ ಡಾ. ಆರ್ಥರ್​ ರೋಡ್ರಿಗಸ್​, ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಗಣೇಶ್​ ಕಾಮತ್​, ಸಿಎಸ್​ಐ ಕರ್ನಾಟಕ ದಕ್ಷಿಣ ಸಭಾಪ್ರಾಂತ್ಯದ ಅಧ್ಯಕ್ಷೆ ಭಾರತಿ ಹೇಮಚಂದ್ರ, ಉಡುಪಿ ವಲಯಾಧ್ಯಕ್ಷ ಐವಾನ್​ ಡಿಸೋನ್ಸ್​ ಉಪಸ್ಥಿತರಿದ್ದರು.

ಚಾಪ್ಲಿನ್​ ರೆ. ರೇಚಲ್​ ಡಿಸಿಲ್ವಾ ಪ್ರಾರ್ಥಿಸಿದರು. ಆಸ್ಪತ್ರೆಯ ಪಿಆರ್​ಒ ರೋಹಿ ರತ್ನಾಕರ್​ ವಂದಿಸಿದರು. ಲಿಯೋನಾ ಸ್ಟ್ರೆಲಿಟಾ ಕಾರ್ಯಕ್ರಮ ನಿರೂಪಿಸಿದರು.

ಹಿರಿಯರ ಆರೋಗ್ಯ ರಕ್ಷಣೆಯ ಕಾಳಜಿ

ಅಧ್ಯಕ್ಷತೆ ವಹಿಸಿದ್ದ ಮಿಷನ್​ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್​ ಜತ್ತಣ್ಣ ಮಾತನಾಡಿ, ದೇಶದಲ್ಲಿ 14 ಕೋಟಿಯಷ್ಟು ಜನರು 60 ವರ್ಷ ಮೇಲ್ಪಟ್ಟವರಿದ್ದಾರೆ. ಅವರಲ್ಲಿ ಹೆಚ್ಚಿನ ಜನರಿಗೆ ಅನೇಕ ಸಮಸ್ಯೆ ಹಾಗೂ ಕುಟುಂಬದವರು ಜತೆಯಲ್ಲಿ ಇಲ್ಲದಿರುವುದು, ವಾಹನ ಸೌಕರ್ಯ ಸೇರಿದಂತೆ ಇನ್ನಿತರ ಕಾರಣದಿಂದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಅಂತಹ ಹಿರಿಯರಿಗೆ ಅನುಕೂಲ ಆಗಲು ಲೊಂಬಾರ್ಡ್​ ಆಸ್ಪತ್ರೆಯು ಮನೆ ಆರೈಕೆ ಸೇವೆ ಆರಂಭಿಸಿದೆ. ರಕ್ತ ತಪಾಸಣೆ, ಶುಶ್ರೂಷಾ ಆರೈಕೆ, ಭೌತ ಚಿಕಿತ್ಸೆ ಹಾಗೂ ವಾಟ್ಸಾಪ್​ ಮಾಡಿದರೆ ಮನೆಗೇ ಔಷಧವನ್ನೂ ಪೂರೈಕೆ ಮಾಡಲಿದ್ದೇವೆ. ಡಾ. ಗಣೇಶ್​ ಕಾಮತ್​ ಆವರು ಪ್ರತಿದಿನ ಮಧ್ಯಾಹ್ನ 3 ರಿಂದ 5ರ ವರೆಗೆ ಮನೆ ಆರೈಕೆ ಸೇವೆ ನೀಡಲಿದ್ದಾರೆ. ನೇತ್ರತಜ್ಞರಾದ ಡಾ. ನರೇಂದ್ರ ಹಾಗೂ ಡಾ. ಆರ್ಥರ್​ ಅವರು ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರ ವರೆಗೆ ಹೊರರೋಗಿಗಳ ಸೇವೆಗೆ ಲಭ್ಯ ಇರಲಿದ್ದಾರೆ ಎಂದರು.

ಜನರು ಶಿಕ್ಷಣ, ವಿದ್ಯುತ್​ ಹಾಗೂ ಆರೋಗ್ಯ ಸೇವೆಯನ್ನು ಉಚಿತವಾಗಿ ಬಯಸುತ್ತಾರೆ. ಆದರೆ, ಬಾರ್​ಗಳಲ್ಲಿ ಹಾಗೂ ಅಗತ್ಯತೆಯೇ ಇಲ್ಲದ ಕಡೆ ಹಣ ವ್ಯಯಿಸುತ್ತಾರೆ. ಆಸ್ಪತ್ರೆ ವಿಚಾರ ಬಂದಾಗ ವೈದ್ಯರು ಸುಲಿಗೆ ಮಾಡುತ್ತಾರೆ ಎನ್ನುತ್ತಾರೆ. ಇದೀಗ ಲೊಂಬಾರ್ಡ್​ ಆಸ್ಪತ್ರೆ ಮೂಲ ವೆಚ್ಚವನ್ನಷ್ಟೇ ಆಕರಿಸಿ ಹೋಮ್​ಕೇರ್​ ಸೇವೆ ನೀಡಲಿದೆ. ಡಾ. ಆರ್ಥರ್​ ರೋಡ್ರಿಗಸ್​. ನೇತ್ರತಜ್ಞ. ಲೊಂಬಾರ್ಡ್​ ಆಸ್ಪತ್ರೆ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net