ಫೆ.22ರಂದು ಹೊಂಬೆಳಕು ಕ್ರೀಡೋತ್ಸವ , ಸಾಂಸ್ಕೃತಿಕ ಕಾರ್ಯಕ್ರಮ

IMG-20250204-WA0125
Published on


ಮಂಗಳೂರು :ಗ್ರಾಮ ಸ್ವರಾಜ್ ಪ್ರತಿಷ್ಠಾನ ಇದರ ವತಿಯಿಂದ ಫೆ.22ರಂದು ನಗರದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ
2ನೇ ಆವೃತ್ತಿಯ ಹೊಂಬೆಳಕು ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 6082 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸುಮಾರು 2500 ಮಂದಿ ಪಂಚಾಯಿತಿ
ನೌಕರರಿದ್ದಾರೆ. ಇವರೆಲ್ಲರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತಿಗಳ ಸಹಕಾರದೊಂದಿಗೆ ಹೊಂಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ, ಎಂಎಲ್‌ಸಿ ಮಂಜುನಾಥ ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆದಿದ್ದ ಮೊದಲನೇ ಆವೃತ್ತಿಯ ಹೊಂಬೆಳಕು ಕಾರ್ಯಕ್ರಮದಲ್ಲಿ 6000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿತ್ತು.ಅಧಿಕಾರಿಗಳನ್ನು ಹಾಗೂ ಪಕ್ಷ ಬೇಧವಿಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು. ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಶಿಸ್ತುಬದ್ಧ ಪ್ರಥಮ ತಂಡಕ್ಕೆ 50,000 ರೂ., ದ್ವಿತೀಯ 25,000 ರೂ. ನಗದು ಬಹುಮಾನ ನೀಡಲಾಗುವುದು. ಪಥ ಸಂಚಲನಕ್ಕೆ ನನ್ನ ಕನಸಿನ ಭಾರತ, ಗ್ರಾಮ ಸ್ವರಾಜ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ನೀಡಲಾಗಿದೆ ಎಂದು ಅವರು ತಿಳಿಸಿದರು.
ವಾಲಿಬಾಲ್, ಉಪ್ಪಿನ ಮೂಟೆ, ಲಿಂಬೆ ಚಮಚ ಇತ್ಯಾದಿ ಕ್ರೀಡೆಗಳ ಜತೆಗೆ ದೇಶಭಕ್ತಿಗೀತೆ, ಸಮೂಹ ನೃತ್ಯ, ಜಾನಪದ ನೃತ್ಯ ಇತ್ಯಾದಿ ಸ್ಪರ್ಧೆ ಇರಲಿದೆ. ಪ್ರತೀ ತಾಲೂಕಿನ ಉತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರ ನೀಡಲಾಗುವುದು. ಕ್ರೀಡಾಳುಗಳಿಗೆ ಟೀ ಶರ್ಟ್ ಊಟ. ಉಪಚಾರ ವ್ಯವಸ್ಥೆ ಇರಲಿದೆ ಎಂದು ಅವರು ತಿಳಿಸಿದರು.
ಸಂಘಟನೆಯ ಗೌರವ ಸಲಹೆಗಾರ ಹರೀಶ್ ಕುಮಾರ್, ಗ್ರಾಮ ಸ್ವರಾಜ್ ಪ್ರತಿಷ್ಠಾನದ ಸದಸ್ಯರಾದ ಸುಭಾಶ್ಚಂದ್ರ ಶೆಟ್ಟಿ, ಲಾರೆನ್ಸ್ ಡಿಸೋಜ, ಪ್ರವೀಣ್‌ಚಂದ್ರ ಆಳ್ವ, ಅನಿಲ್ ಕುಮಾರ್, ಸುರೇಂದ್ರ ಕಂಬಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net