

ನ್ಯಾಮತಿ: ಜೀವಸಂಕುಲಕ್ಕೆ ಅನ್ನ ನೀಡುವ ಭೂ ತಾಯಿಗೆ ಗರ್ಭಿಣಿಯಂತೆ ಸಿಂಗರಿಸಿ ಕೃಷಿಕರು ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಿಸಿದರು.
ಕೃಷಿ ಕುಟುಂಬಗಳು ಜಮೀನುಗಳಿಗೆ ಪೈರಿಗೆ ಹೊಸ ಸೀರೆ ಉಡಿಸಿ, ಹಸಿರು ಬಳೆ ತೊಡಿಸಿ, ಪುಷ್ಪಗಳಿಂದ ಅಲಂಕರಿಸಿ ಭೂಮಿ ತಾಯಿಯನ್ನು ಆರಾಧಿಸಿದರು. ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಈ ರೀತಿ ಆಚರಣೆಯಿಂದ ಭೂಮಿತಾಯಿ ಸಂತೃಪ್ತಳಾಗುವಳು ಎಂಬುದು ರೈತರ ನಂಬಿಕೆ.
ವಿಶೇಷ ಖಾದ್ಯ: ಪಲ್ಯ, ಕೊಸಂಬರಿ, ರೊಟ್ಟಿ, ಚಟ್ನಿ, ಪುಂಡಿ ಸೊಪ್ಪಿನ ಪಲ್ಯ, ಹೋಳಿಗೆ, ಗೋಧಿ ಹುಗ್ಗಿ, ಕರಿಗಡುಬು, ಮೊಸರನ್ನ, ಕರಿದ ಹಪ್ಪಳ, ಸಂಡಿಗೆ, ಬೊಂಡಾ ಮತ್ತಿತರ ವಿಶೇಷ ಅಡುಗೆ ತಯಾರಿಸಿದ್ದರು.
ಉತ್ತಮ ಬೆಳೆಗಾಗಿ ಚರಗ: ಪೂಜೆಯ ನಂತರ ಹೊಲ, ಗದ್ದೆ, ತೋಟಗಳ ಸುತ್ತ ಗೋಧಿ ಹುಗ್ಗಿ, ಹೋಳಿಗೆ, ಮೊಸರನ್ನ, ಕೊಸಂಬರಿ, ಪಲ್ಯ ಮತ್ತಿತರ ಎಲ್ಲ ಆಹಾರವನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ ಚರಗ ಚೆಲ್ಲಿದರು. ಇದರಿಂದ ಇಳುವರಿ ಹೆಚ್ಚು ಬರುತ್ತದೆಂಬ ನಂಬಿಕೆ ಇದೆ ಎನ್ನುತ್ತಾರೆ ರೈತ ಮುಖಂಡ ಬಿ.ಎಚ್. ಉಮೇಶಪ್ಪ ಬೆಳಗುತ್ತಿ.