

ಹುಬ್ಬಳ್ಳಿ: ಪ್ರಸಕ್ತ ಸಾಲಿನಿಂದ ಸಿಎ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನವನ್ನು ಸರಳೀಕರಣಗೊಳಿಸಿ ಅಮೂಲಾಗ್ರವಾಗಿ ಬದಲಾವಣೆ ಮಾಡಲಾಗಿದೆ. ಲೆಕ್ಕಪರಿಶೋಧನೆ ಕ್ಷೇತ್ರದಲ್ಲಿ ಸಹ ಅನೇಕ ಸುಧಾರಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ಅಧ್ಯಕ್ಷ ಅನಿಕೇತ ತಲಾಠಿ ಹೇಳಿದರು.
ಐಸಿಎಐ ಹುಬ್ಬಳ್ಳಿ ಶಾಖೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ನವೆಂಬರ ತಿಂಗಳಲ್ಲಿ ಮುಂಬೈಯಲ್ಲಿ ಏರ್ಪಡಿಸಿದ್ದ ವಿಶ್ವ ಲೆಕ್ಕಪರಿಶೋಧಕರ ಸಮ್ಮೇಳನದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಕಾರ್ಯಕ್ಷೇತ್ರದ ಗುಣಮಟ್ಟದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದವು ಎಂದರು.
ಲೆಕ್ಕ ಪರಿಶೋಧನೆ ಕ್ಷೇತ್ರವು ಕೇವಲ ಕರಾಕರಣೆ ವಿಷಯಗಳು ಹಾಗೂ ಆಡಿಟ್ಗೆ ಸೀಮಿತವಾಗಿರದೇ ವಾಣಿಜ್ಯ ಸಂಸ್ಥೆಗಳಲ್ಲಿ ನಡೆಯುವ ಹಣಕಾಸಿನ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಅವುಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯುವುದು ಮತ್ತು ನಿರ್ದಿಷ್ಟ ಮಾನದಂಡಗಳನ್ನು ಸ್ಥಾಪಿಸಿ ಲೆಕ್ಕಪರಿಶೋಧಕರು ಕಡ್ಡಾಯವಾಗಿ ಅವುಗಳನ್ನು ಪಾಲಿಸುವಂತೆ ಮಾಡುವುದು ಆಗಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಐಸಿಎಐ ಶಾಖೆಯ ಸಭಾಗ್ರಹದ ನವೀಕರಣಕ್ಕಾಗಿ 2 ಕೋಟಿ ರೂ. ಗಳ ಅನುದಾನ ಬಿಡುಗಡೆ ಮಾಡುವುದಾಗಿ ಅವರು ಘೊಷಿಸಿದರು. ಹುಬ್ಬಳ್ಳಿಯ ಹಿರಿಯ ಲೆಕ್ಕ ಪರಿಶೋಧಕ ಎನ್.ಎ. ಚರಂತಿಮಠ ಅವರು ಸದಸ್ಯರ ಕಲ್ಯಾಣ ನಿಧಿಗೆ 10 ಲಕ್ಷ ರೂ. ನೀಡುವುದಾಗಿ ವಾಗ್ದಾನ ಮಾಡಿದರು.
ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜುನ ಪಿಸೆ ಸ್ವಾಗತಿಸಿದರು. ಕೇಂದ್ರ ಮಂಡಳಿಯ ಸದಸ್ಯ ಶ್ರೀನಿವಾಸ ಕೋಥಾ, ಹೈದರಾಬಾದಿನ ದಯನಿವಾಸ ಶರ್ವ, ದಕ್ಷಿಣ ವಲಯದ ಮಹಾಮಂಡಳದ ಅಧ್ಯಕ್ಷ ಪನ್ನಾರಾಜ್, ಉಪಾಧ್ಯಕ್ಷ ಗೀತಾ ಇದ್ದರು. ಅಮಿತ ಬಾಬಜಿ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಧನಪಾಲ ಮುನ್ನೋಳಿ ವಂದಿಸಿದರು.