

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಯಾದವಾಡ ಗ್ರಾಮದ ಗ್ರಾಮದೇವಿಯರಾದ ದ್ಯಾಮವ್ವ- ದುರ್ಗಮ್ಮ ಮೂರ್ತಿಗಳನ್ನು ಗುರುವಾರ ರಾತ್ರಿ ಸೀಮೆಗೆ ತೆಗೆದುಕೊಂಡು ಹೋಗಿ ಧಾರ್ಮಿಕ ವಿಧಿವಿಧಾನ ಪೂರ್ಣಗೊಳಿಸಲಾಯಿತು. ಅಂದು ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಹೋಳಿಗೆ- ಮಾವಿನ ಹಣ್ಣಿನ ಶಿಖರ್ಣಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಬುಧವಾರ ರಾತ್ರಿಯಿಡೀ ಗ್ರಾಮದ ಸುಮಾರು 400 ಮಹಿಳೆಯರು ಪ್ರಸಾದ ವ್ಯವಸ್ಥೆಗೆ ಹೋಳಿಗೆ ಮಾಡುವ ಮೂಲಕ ಭಕ್ತಿಸೇವೆ ಸಲ್ಲಿಸಿದರು. 8 ಕ್ವಿಂಟಲ್ ಮಾವಿನ ಹಣ್ಣು, 12 ಕ್ವಿಂಟಲ್ ಬಾಳೆಹಣ್ಣಿನ ಶಿಖರ್ಣಿ ಜತೆಗೆ 10 ಸಾವಿರ ಹೋಳಿಗೆ ಸಿದ್ಧಪಡಿಸಿ ಬಂದ ಭಕ್ತರಿಗೆಲ್ಲ ಉಣಬಡಿಸಿದರು.
ಶುಕ್ರವಾರ ನವಕನ್ನಿಕೆಯರ ಪೂಜೆ, ಪುನಃ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಸಿಂಗನಹಳ್ಳಿಯ ರಾಚೋಟೇಶ್ವರ ಮಹಾಸ್ವಾಮೀಜಿ, ನಯಾನಗರದ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ, ಯಾದವಾಡ- ಮುಳುಮುತ್ತಲದ ಡಾ. ಆನಂದ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಬಳಿಕ ಗ್ರಾಮದ ಮಕ್ಕಳಿಂದ ವಿವಿಧ ಕಲಾಪ್ರದರ್ಶನ, ಸಮಾರೋಪದ ಮೂಲಕ ಗ್ರಾಮದೇವಿಯರ ಜಾತ್ರೆಗೆ ತೆರೆ ಬೀಳಲಿದೆ.