ಕೃಷ್ಣಾ ನದಿ ತೀರದಲ್ಲಿ ಹೋಳಿಗೆ ಊಟ

Holi dinner on the banks of the Krishna River
ರಬಕವಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ಮಂಗಳವಾರ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಜನರು ಪುಣ್ಯಸ್ನಾನ ಮಾಡಿದರು.
Published on

ರಬಕವಿ/ಬನಹಟ್ಟಿ: ಗೋಕಾಕ ತಾಲೂಕಿನ ತಳಕಟನಾಳ ಗ್ರಾಮ ದೇವತೆ ಲಕ್ಷ್ಮಿದೇವಿಗೆ ವಿಶೇಷ ಪೂಜೆ ಅಂಗವಾಗಿ ಮಂಗಳವಾರ ಮಧ್ಯಾಹ್ನ ಕೃಷ್ಣಾ ನದಿ ತಟದಲ್ಲಿ 3 ಕ್ವಿಂಟಾಲ್ ಬೇಳೆ ಹೋಳಿಗೆ ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ಎರಡು ನೂರು ವರ್ಷದಿಂದ ಲಕ್ಷ್ಮಿದೇವಿಗೆ ನದಿ ದಡದಲ್ಲಿ ಪೂಜೆ ಹಾಗೂ ಉಡಿ ತುಂಬುವ ಕಾರ್ಯ ಪರಂಪರಾಗತವಾಗಿ ನಡೆಯುತ್ತ ಬಂದಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ಈ ಸಂಪ್ರದಾಯ ಆಚರಿಸಲಾಗುತ್ತದೆ ಎಂದು ತಳಕಟನಾಳ ಗ್ರಾಮದ ಹಿರಿಯರಾದ ಲಗಮಣ್ಣ ದೊಡಮನಿ ತಿಳಿಸಿದರು.

ಸೋಮವಾರ ರಾತ್ರಿ ಕೃಷ್ಣಾ ತೀರಕ್ಕೆ ಆಗಮಿಸಿದ ತಳಕಟನಾಳ ಮಹಿಳೆಯರು, ಕೃಷ್ಣೆಯಲ್ಲಿ ಮಿಂದೆದ್ದು ಬೆಳಗಾಗುವ ತನಕ ಹೋಳಿಗೆ ಮಾಡಿದರು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ನೈವೇದ್ಯ ಸಮರ್ಪಿಸಿದರು. ಮೂರು ದಿನ ಈ ಕಾರ್ಯ ನಡೆಯುತ್ತದೆ. ಒಂದು ತಿಂಗಳ ಮುಂಚಿತವಾಗಿ ಗ್ರಾಮದಲ್ಲಿ ಪ್ರತಿ ಮನೆಯಿಂದ 5ನೂರು ರೂ. ಸಂಗ್ರಹ ಮಾಡಿ ಮೂರು ದಿನಕ್ಕೆ ಆಗುವಷ್ಟು ಪದಾರ್ಥಗಳನ್ನು ಖರೀದಿಸಲಾಗುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಮ್ಮ ಗ್ರಾಮದ ಎಲ್ಲರೂ ಮನೆಗೆ ಕೀಲಿ ಹಾಕಿ ಇಲ್ಲಿಗೆ ಬರುತ್ತೇವೆ ಎನ್ನುತ್ತಾರೆ ಗ್ರಾಮಸ್ಥ ಬಾಲಪ್ಪ ಹಟ್ಟಿ.

ಮಂಗಳವಾರ ಮಧ್ಯಾಹ್ನ ಐದು ನೂರಕ್ಕೂ ಅಧಿಕ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೋಳಿಗೆ ಪ್ರಸಾದ ವಿತರಣೆಗೆ ಚಾಲನೆ ನೀಡಲಾಯಿತು. ಗ್ರಾಮದ ಹಿರಿಯರಾದ ಬಸಪ್ಪ ಸವತಿಹಾರ, ಬಾಳಪ್ಪ ಜಕ್ಕನ್ನವರ, ಹಣಮಂತ ಹೊನ್ನನ್ನವರ, ಶೇಖರ ಹೊಳಿಕಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net